ಹತ್ತು ದಿನದ ಬೆಳಗಾವಿ ಅಧಿವೇಶನಕ್ಕೆ 26 ಕೋಟಿ ರೂ.ವೆಚ್ಚ: ಶಂಕರಮೂರ್ತಿ
ಬೆಂಗಳೂರು, ನ. 10: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನ.13ರಿಂದ 24ರ ವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನಕ್ಕೆ ಸುಮಾರು 25 ರಿಂದ 26 ಕೋಟಿ ರೂ.ವೆಚ್ಚವಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ವಾಸ್ತವ್ಯ ಹೂಡುವ ಸದಸ್ಯರಿಗೆ ಪ್ರತಿನಿತ್ಯ 2,500 ರೂ.ಹಾಗೂ ಹುಬ್ಬಳ್ಳಿಯಲ್ಲಿ ವಾಸ್ತವ್ಯಹೂಡುವ ಸದಸ್ಯರಿಗೆ 5 ಸಾವಿರ ರೂ.ಭತ್ತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನೌಕಾನೆಲೆಗೆ ಭೇಟಿ: ನ.18ರ ಶನಿವಾರ ಪರಿಷತ್ ಸದಸ್ಯರನ್ನು ಕಾರವಾರದ ಸೀಬರ್ಡ್ ನೌಕಾನೆಲೆ ವೀಕ್ಷಣೆಗೆ ಕರೆದೊಯ್ಯಲಾಗುವುದು. ಶಾಸಕರು ನೌಕಾನೆಲೆ ಭೇಟಿ ಮಾಡಬೇಕೆಂದು ಪ್ರಧಾನಿ ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೌಕಾನೆಲೆ ಮುಖ್ಯಸ್ಥರು ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ನ.13ರ ಸೋಮವಾರ ಬೆಳಗ್ಗೆ ಅಧಿವೇಶನ ಸಮಾವೇಶಗೊಳ್ಳಲಿದ್ದು, ಪ್ರಶ್ನೋತ್ತರ ಕಲಾಪ, ಮೂರು ವಿಧೇಯಕಗಳ ಅನುಮೋದನೆ ನಡೆಯಲಿದೆ. ಇದುವರೆಗೂ 805 ಪ್ರಶ್ನೆಗಳು ಬಂದಿದ್ದು, ಆ ಪೈಕಿ 75 ಪ್ರಶ್ನೆಗಳು ಚುಕ್ಕೆ ಗುರುತಿನವು ಆಗಿರುತ್ತದೆ ಎಂದು ವಿವರ ನೀಡಿದರು.
ತಪ್ಪು ವಿಳಾಸ ನೀಡಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದ್ದಲ್ಲದೆ, ಸಾರಿಗೆ ಭತ್ತೆ ಪಡೆದ ಆರೋಪಕ್ಕೆ ಸಿಲುಕಿರುವ ಎಂಟು ಮಂದಿ ಮೇಲ್ಮನೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಅಧಿವೇಶನದ ಬಳಿಕ ರಾಜ್ಯದ ಅಡ್ವೋಕೇಟ್ ಜನರಲ್ ಜತೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದರು.
ಆಡಳಿತ ಮತ್ತು ವಿಪಕ್ಷಗಳ ನಡುವೆ ಸಮನ್ವಯತೆ ಕೊರತೆ ಹಿನ್ನೆಲೆಯಲ್ಲಿ ವರ್ಷಕ್ಕೆ ಕನಿಷ್ಠ 60 ದಿನದ ಅಧಿವೇಶನ ನಡೆಸಬೇಕೆಂದು ಕಾನೂನು ಮಾಡಿದ್ದರೂ, ಅದು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಬೆಳಗಾವಿಯ ಹತ್ತು ದಿನ ಕಲಾಪ ಸೇರಿ ಕೇವಲ 40 ದಿನಗಳಷ್ಟು ಅಧಿವೇಶನ ನಡೆಸಲಾಗಿದೆ.
-ಡಿ.ಎಚ್.ಶಂಕರಮೂರ್ತಿ, ಮೇಲ್ಮನೆ ಸಭಾಪತಿ







