ಟಿಪ್ಪುಸುಲ್ತಾನ್ ಭಾವೈಕ್ಯತೆಯ ಸಂಕೇತ: ಶಾಸಕ ಬಸವರಾಜ

ಬೆಂಗಳೂರು, ನ.10: ರಾಜ್ಯ ಸರಕಾರವು ಹಿಂದೂ-ಮುಸ್ಲಿಮರ ನಡುವಿನ ಭಾವೈಕ್ಯತೆಯ ಸಂಕೇತವಾಗಿ ‘ಮೈಸೂರು ಹುಲಿ’ ಹಝ್ರತ್ ಟಿಪ್ಪುಸುಲ್ತಾನ್ ಅವರ ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದು ಶಾಸಕ ಬಿ.ಎ.ಬಸವರಾಜ ಹೇಳಿದ್ದಾರೆ.
ಶುಕ್ರವಾರ ನಗರದ ಕೆ.ಆರ್.ಪುರದಲ್ಲಿರುವ ಬೆಂಗಳೂರು ಪೂರ್ವ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಮೈಸೂರು ಹುಲಿ’ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ದೇಶವನ್ನು ಕಟ್ಟುವ ಕೆಲಸಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಮಹನೀಯರನ್ನು ಗುರುತಿಸಿ ಅವರ ಜಯಂತಿಗಳನ್ನು ಸರಕಾರ ಆಚರಣೆ ಮಾಡುತ್ತಿದೆ. ಅದೇ ರೀತಿ, ಹಿಂದೂ ಹಾಗೂ ಮುಸ್ಲಿಮರ ನಡುವಿನ ಭಾವೈಕ್ಯತೆಯ ಸಂಕೇತವಾಗಿ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಟಿಪ್ಪುಸುಲ್ತಾನ್ ಒಬ್ಬ ವೀರ ಹೋರಾಟಗಾರ, ಅತ್ಯುತ್ತಮ ಆಡಳಿತಗಾರ ಎನ್ನುವುದಕ್ಕೆ ಅನೇಕ ನಿರ್ದಶನಗಳಿವೆ. ಇದು ಇತಿಹಾಸದ ಪುಟುಗಳಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಟಿಪ್ಪುಸುಲ್ತಾನ್‌ರಿಗೆ ಸಂಬಂಧಿಸಿದ ವಿಷಯಗಳನ್ನು ಬೇರೆ ಬೇರೆ ರೀತಿಯಲ್ಲಿ ಬಿಂಬಿಸಲು ನಡೆಯುತ್ತಿರುವ ಪ್ರಯತ್ನ ಸರಿಯಲ್ಲ ಎಂದು ತಿಳಿಸಿದರು.
ನಮ್ಮ ರಾಜ್ಯಕ್ಕೆ ಟಿಪ್ಪುಸುಲ್ತಾನ್ ನೀಡಿರುವ ಕೊಡುಗೆಗಳ ಮಹತ್ವವನ್ನು ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢ ಸಂಕಲ್ಪ ಮಾಡಿ ಟಿಪ್ಪುಸುಲ್ತಾನ್ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಿದರು. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಟಿಪ್ಪುಸುಲ್ತಾನ್ ಜಯಂತಿಗೆ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಿವೆ. ಆದರೆ, ಬಿಜೆಪಿ ಮಾತ್ರ ಟಿಪ್ಪುಸುಲ್ತಾನ್‌ರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿದೆ. ಆದರೆ, ಈಗಿರುವ ನಮ್ಮ ರಾಜ್ಯ, ತಮಿಳುನಾಡು, ಆಂಧ್ರ, ಕೇರಳದಲ್ಲಿರುವ ಹಲವಾರು ದೇವಾಲಯಗಳು, ಮಠಗಳಿಗೆ ಟಿಪ್ಪುಸುಲ್ತಾನ್ ನೆರವು ನೀಡಿರುವ ದಾಖಲೆಗಳು ನಮ್ಮ ಮುಂದಿದೆ ಎಂದು ಹೇಳಿದರು.
ನಮ್ಮ ಸಾಮ್ರಾಜ್ಯದ ದಿವಾನರನ್ನಾಗಿ ಪೂರ್ಣಯ್ಯರನ್ನು, ಖಜಾಂಚಿ, ಮುಖ್ಯ ಸೇನಾಧಿಕಾರಿ ಹೀಗೆ ಹಲವಾರು ಹುದ್ದೆಗಳಿಗೆ ಹಿಂದೂಗಳನ್ನೆ ಟಿಪ್ಪುಸುಲ್ತಾನ್ ನೇಮಕ ಮಾಡಿದ್ದರು. ಶ್ರೀರಂಗನಾಥ ದೇವಾಲಯ, ಶೃಂಗೇರಿ ಶಾರದಾ ಪೀಠ, ನಂಜನಗೂಡಿನ ಪಚ್ಚೇ ಲಿಂಗ ಎಲ್ಲವೂ ನಮಗೆ ಟಿಪ್ಪು ಸರ್ವಧರ್ಮ ಸಹಿಷ್ಣುವಾಗಿದ್ದ ಎನ್ನುವುದಕ್ಕೆ ನಿದರ್ಶನಗಳು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿದ್ದ ಯುಗ ಪುರುಷರನ್ನು ಸ್ಮರಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಮುಂದಿನ ಪೀಳಿಗೆಗೆ ಈ ದೇಶ ಹಾಗೂ ರಾಜ್ಯದ ಭವ್ಯ ಇತಿಹಾಸವನ್ನು ಪರಿಚಯಿಸಬೇಕು. ಯಾರೂ ಏನೇ ವಿರೋಧ ಮಾಡಿದರೂ ನಾವು ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸುವುದಿಲ್ಲ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಕೊಟ್ಟಿದ್ದೇವೆ. ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ತೇಜಸ್‌ಕುಮಾರ್, ವಿಶೇಷ ತಹಶೀಲ್ದಾರ್ ಲಕ್ಷ್ಮೀ, ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ನಾಮ ನಿರ್ದೇಶಿತ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ನಿವೃತ್ತ ಡಿಸಿಪಿ ಎಂ.ಡಿ.ಮುಲ್ಲಾ, ಮುಖಂಡರಾದ ಎಲ್.ಮುನಿಸ್ವಾಮಿ, ದೊಡ್ಡ ಎಲ್ಲಪ್ಪ, ಎಚ್.ಎಸ್.ಅಮಾನುಲ್ಲಾ, ಮಸ್ತಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







