ಭಾಗಮತಿಯಲ್ಲಿ ಅನುಷ್ಕಾ ಶೆಟ್ಟಿಗೆ ವಿಭಿನ್ನ ಪಾತ್ರ

ಬಾಹುಬಲಿಯಿಂದ ರಾಷ್ಟ್ರಮಟ್ಟದ ಸ್ಟಾರ್ ಇಮೇಜ್ ಪಡೆದಿರುವ ತುಳುನಾಡಿನ ಬೆಡಗಿ ಅನುಷ್ಕಾ ಶೆಟ್ಟಿಯ ಹುಟ್ಟುಹಬ್ಬದ ವೇಳೆಗೆ ಆಕೆಯ ಅಭಿನಯದ ಹೊಸ ಚಿತ್ರ ‘ಭಾಗಮತಿ’ಯ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವೆಂಬುದು ಫಸ್ಟ್‌ಲುಕ್‌ನಿಂದಲೇ ಸ್ಪಷ್ಟವಾಗುತ್ತದೆ. ರಕ್ತಸಿಕ್ತವಾದ ಉಡುಗೆಯಲ್ಲಿ, ಒಂದು ಕೈಯಲ್ಲಿ ಸುತ್ತಿಗೆಯನ್ನು ಹಿಡಿದು, ರೌದ್ರಾವತಾರದ ಮುಖಭಾವದ ಅನುಷ್ಕಾ ಶೆಟ್ಟಿಯ ಪೋಸ್ಟರ್ ಚಿತ್ರದ ಬಗ್ಗೆ ಭಾರೀ ಕುತೂಹಲವನ್ನು ಹುಟ್ಟಿಸಿದೆ.
ಪಿಳ್ಳಾ ಜಮೀನ್‌ದಾರ್ ಖ್ಯಾತಿಯ ಜಿ.ಅಶೋಕ್, ‘ಭಾಗಮತಿ’ಯ ನಿರ್ದೇಶಕರು. ಬಾಹುಬಲಿಯ ಪ್ರಚಂಡ ಯಶಸ್ಸಿನ ಬಳಿಕ ದಕ್ಷಿಣದ ರಾಜ್ಯಗಳಲ್ಲಿ ಅನುಷ್ಕಾ ಶೆಟ್ಟಿಯ ಜನಪ್ರಿಯತೆ ಮುಗಿಲುಮುಟ್ಟಿದೆ. ಇದನ್ನು ಕ್ಯಾಶ್‌ಮಾಡಿಕೊಳ್ಳಲು ಹೊರಟಿರುವ ‘ಭಾಗಮತಿ’ಯ ನಿರ್ಮಾಪಕರು ತೆಲುಗಿನ ಜೊತೆ ಏಕಕಾಲದಲ್ಲಿ ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ‘ಭಾಗಮತಿ’ಯನ್ನು ರಿಲೀಸ್ ಮಾಡಲಿದ್ದಾರೆ.
ಅನುಷ್ಕಾ ಶೆಟ್ಟಿ ಜೊತೆಗೆ ಉದಯೋನ್ಮುಖ ನಟ ಆದಿ ಪಿನಿಶೆಟ್ಟಿ, ಉನ್ನಿಮುಕುಂದನ್ ಹಾಗೂ ಮಲಯಾಳಂನ ಖ್ಯಾತ ನಟ ಜಯರಾಮ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕಥಾವಸ್ತುವಿನ ಬಗ್ಗೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಯಾವುದೇ ಗುಟ್ಟುಬಿಟ್ಟುಕೊಡದಿದ್ದರೂ, ಇದೊಂದು ಹಾರರ್ ಕಾಮಿಡಿಯೆಂದು ಟಾಲಿವುಡ್ ಮಂದಿ ಹೇಳಿಕೊಳ್ಳುತ್ತಿದ್ದಾರೆ.
‘ಅರುಂಧತಿ’, ‘ಬಾಹುಬಲಿ 1-2’ ಚಿತ್ರಗಳ ಬಳಿಕ ಅನುಷ್ಕಾ ಚಿತ್ರಬದುಕಿನಲ್ಲಿ ‘ಭಾಗಮತಿ’ ಇನ್ನೊಂದು ಮೈಲುಗಲ್ಲಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.







