ದಾವಣಗೆರೆ: ಟಿಪ್ಪು ಜಯಂತಿ ತಡೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ದಾವಣಗೆರೆ, ನ.10: ಟಿಪ್ಪು ಜಯಂತಿ ಹಾಗೂ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ತಡೆಯಲು ಯತ್ನಿಸಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ನೂರಕ್ಕೂ ಅಧಿಕ ಕಾರ್ಯಕರ್ತರನ್ನು ನಗರದಲ್ಲಿ ಶುಕ್ರವಾರ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ನಗರದ ಜಯದೇವ ವೃತ್ತದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಜಯಂತಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೈಗೆ ಕಪ್ಪು ಬಟ್ಟೆ ಧರಿಸಿ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಹಾಕಿದ್ದ ಬ್ಯಾರಿಕೇಡ್‍ಗಳನ್ನು ದಬ್ಬಿ ಟಿಪ್ಪು ಜಯಂತಿ ಕಾರ್ಯಕ್ರಮದ ಸರ್ಕಾರಿ ಹೈಸ್ಕೂಲ್ ಮೈದಾನದಕ್ಕೆ ತೆರಳಲು ಮುಂದಾಗುತ್ತಿದ್ದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಪೊಲೀಸರು ಕೂಡಲೇ ತಡೆಯಲು ಯತ್ನಿಸಿ ಎರಡು ಖಾಸಗಿ ಬಸ್‍ಗಳನ್ನು ತರಿಸಿ ಪ್ರತಿಭಟನಾ ನಿರತರನ್ನು ಬಂಧಿಸಿ ಕೊರೆದೊಯ್ದರು.
ಪ್ರತಿಭಟನೆಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ವೈ.ಮಲ್ಲೇಶ್, ನವೀನ್, ಜಯಶೀಲಮ್ಮ, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಟಿ.ಪಾಟೀಲ್ ಮತ್ತಿರರು ಇದ್ದರು.





