ಸುಪ್ರೀಂ ಕೋರ್ಟ್ ಆದೇಶ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ಧರಣಿ
ಭಡ್ತಿ ಮೀಸಲಾತಿ

ಬೆಂಗಳೂರು, ನ.10: ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗ(ಅಹಿಂಸಾ)ದ ಸರಕಾರಿ ನೌಕರರ ಒಕ್ಕೂಟ ನಗರದಲ್ಲಿ ಬೃಹತ್ ಧರಣಿ ನಡೆಸಿದರು.
ನಗರದ ಸ್ವಾತಂತ್ರ ಉದ್ಯಾನವನದಿಂದ ಅರಮನೆ ಮೈದಾನದವರೆಗೂ ರ್ಯಾಲಿ ನಡೆಸಿ ಭಡ್ತಿ ಮೀಸಲಾತಿ ಆದೇಶಕ್ಕೆ ಸಂಬಂಧಿಸಿದಂತೆ ಮುಂದಿನ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸಬಾರದು, ಆದೇಶವನ್ನು ಕೂಡಲೇ ಜಾರಿ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅಹಿಂಸಾದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಬೆಳಗಾವಿಯಲ್ಲಿ ಭಡ್ತಿ ಮೀಸಲಾತಿಯ ತಿದ್ದುಪಡಿ ಕಾಯ್ದೆ ಮಂಡಿಸಿ ಸುಪ್ರೀಂಕೋರ್ಟ್‌ನ ಆದೇಶ ಜಾರಿ ಮಾಡದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆ ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಡ್ತಿ ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಇದರಿಂದಾಗಿ ಯಾರಿಗೂ ಅನ್ಯಾಯವಾಗುವುದಿಲ್ಲ. ಸಂವಿಧಾನ ಬದ್ಧವಾದ ಸಮಾನತೆ ಆಶಯಕ್ಕೆ ಇದು ಪೂರಕವಾಗಿದೆ. ಒಂದು ವೇಳೆ ರಾಜ್ಯ ಸರಕಾರ ಈ ಆದೇಶ ಜಾರಿಗೊಳಿಸದಿದ್ದರೆ 8 ಲಕ್ಷಕ್ಕೂ ಅಧಿಕ ನೌಕರರ ಕುಟುಂಬಗಳಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ಸಾಮಾನ್ಯ ವರ್ಗದವರಿಗೆ ಭಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿದೆ. ಮೀಸಲಾತಿ ವರ್ಗದವರಿಗೆ ಕೇವಲ ಮೂರು-ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಮೊದಲನೆ ಭಡ್ತಿ ದೊರಕುತ್ತಿದೆ. ಅಹಿಂಸಾ ವರ್ಗದವರಿಗೆ 20 ರಿಂದ 25 ವರ್ಷಗಳ ಸೇವಾ ಅವಧಿ ಬೇಕಾಗುತ್ತಿದೆ. ಮೀಸಲಾತಿ ವರ್ಗದವರಿಗೆ ಭಡ್ತಿಯ ಎಲ್ಲ ಹುದ್ದೆಗಳಲ್ಲಿ ಶೇ.18 ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಾರೆ. ಇದರಿಂದ 82 ವರ್ಷಗಳವರೆಗೂ ಇತರರಿಗೆ ಅವಕಾಶ ಸಿಗುವುದಿಲ್ಲ ಎಂದರು.
ಅಹಿಂಸಾದ ಸತತ 25 ವರ್ಷಗಳ ಹೋರಾಟದಿಂದಾಗಿ ನಮ್ಮ ಪರವಾದ ತೀರ್ಪು ಬಂದಿದೆ. ಆದರೆ, ಸರಕಾರ 18 ವರ್ಗಗಳಿಗೆ ಮಾತ್ರ ಮಾನ್ಯತೆ ನೀಡುತ್ತಿದೆ. ಅಂದರೆ, ಇನ್ನುಳಿದವರು ಶೋಷಿತ ಸಮುದಾಯ ಭಡ್ತಿ ಹುದ್ದೆಗೆ ಅರ್ಹರಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಧರಣಿಯಲ್ಲಿ ಸಾವಿರಾರು ಅಹಿಂಸಾ ಸರಕಾರಿ ನೌಕರರು ಪಾಲ್ಗೊಂಡಿದ್ದರು. ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಕೊರತೆ ಎದ್ದು ಕಾಣುತ್ತಿದ್ದು.







