ವಿಮಾನದಲ್ಲಿ ಸಿಬ್ಬಂದಿ ಅಸಭ್ಯ ವರ್ತನೆ: ಯುವತಿ ದೂರು
ಬೆಂಗಳೂರು, ನ.10: ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ಸಿಬ್ಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿ ಯುವತಿಯೊಬ್ಬರು ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏರ್ ಏಷ್ಯಾ ಸಿಬ್ಬಂದಿ ಸನ್ಮಿತ್ ಕರಾಂಡಿಕಾರ್, ಕೈಝದ್ ಸುಂಟೋಕ್ ಹಾಗೂ ಜತಿನ್ ರವೀಂದ್ರನ್ ಎಂಬುವರ ವಿರುದ್ಧ ಯುವತಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಘಟನೆ ವಿವರ: ನ.3 ರಂದು ಏರ್ ಏಷ್ಯಾ ವಿಮಾನ ಸಂಖ್ಯೆ 1585ರಲ್ಲಿ ರಾಂಚಿಯಿಂದ ಬೆಂಗಳೂರಿಗೆ ಬರುತ್ತಿದ್ದ ಯುವತಿಗೆ ಏರ್ ಏಷ್ಯಾ ಸಿಬ್ಬಂದಿ ಬೆದರಿಕೆ ಹಾಕಿದ್ದಲ್ಲದೇ, ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಯುವತಿ ಪ್ರಯಾಣದ ವೇಳೆ ಶೌಚಾಲಯ ಸ್ವಚ್ಛವಾಗಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ತಿಳಿಸಿದ ಕಾರಣ ಸಿಬ್ಬಂದಿ ಸನ್ಮಿತ್ ಕರಾಂಡಿಕಾರ್, ಇದು ನನ್ನ ವಿಮಾನ ಎಂದು ಬೆದರಿಸಿ ಅಸಭ್ಯವಾಗಿ ವರ್ತಿಸಿ ಫೋಟೊ ತೆಗೆದಿದ್ದರು. ಬಳಿಕ ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಬಂದಾಗ ಪ್ರಯಾಣಿಕರೆಲ್ಲ ಇಳಿದು ಹೋದ ಮೇಲೆ ಯುವತಿಗೆ ಅಡ್ಡಗಟ್ಟಿ ಕ್ಷಮೆ ಕೋರುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.





