ಆಟೊ ಚಾಲಕರಿಂದ ಶಂಕರ್ ನಾಗ್ ಜನ್ಮದಿನಾಚರಣೆ
ಬೆಂಗಳೂರು, ನ.10: ಪೀಸ್ ಆಟೊ ಸಂಘಟನೆ ವತಿಯಿಂದ ಚಿತ್ರನಟ ಶಂಕರ್ ನಾಗ್ ಅವರ ಹುಟ್ಟು ಹಬ್ಬವನ್ನು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ಎನ್.ರಘು, ಕೆಟ್ಟ ಆಟೊ ಚಾಲಕನನ್ನು ಶಿಕ್ಷಿಸುವುದು ಎಷ್ಟು ಸರಿಯೋ ಒಳ್ಳೆ ಚಾಲಕನನ್ನು ಗೌರವಿಸುವುದು ಅಷ್ಟೇ ಮುಖ್ಯ. ಆದರೆ, ಸಿನಿಮಾಗಳಲ್ಲಿ ಆಟೋ ಚಾಲಕರನ್ನು ಕಳ್ಳರು, ರೌಡಿಗಳಂತೆ ಬಿಂಬಿಸುತ್ತಿದ್ದ ಸಮಯದಲ್ಲಿ ಆಟೋ ಚಾಲಕನನ್ನು ತೆರೆಯ ಮೇಲೆ ಹೀರೋ ಆಗಿ ಬಿಂಬಿಸಿದ ಮೊದಲ ವ್ಯಕ್ತಿ ನಮ್ಮ ಶಂಕರನಾಗ್ ಎಂದು ಹೇಳಿದರು.
ಶಂಕರ್‌ನಾಗ್ ನಮಗೆಲ್ಲ ಆದರ್ಶವಾಗಿದ್ದಾರೆ ಎಂದ ಅವರು, ಬೆಂಗಳೂರಿನ ಸಂಚಾರ ಪೊಲೀಸರು ದೆವ್ವಗಳಂತೆ ವರ್ತಿಸುತ್ತಿದ್ದಾರೆ. ಆಟೋಚಾಲಕರ ಹೊಟ್ಟೆಯ ಮೇಲೆ ಹೊಡೆದು ಅವರ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಖಂಡಿಸಿದರು.
ಪೀಸ್ ಆಟೊ ಸಂಘಟನೆಯ ಮುಖಂಡ ಅನಿಲ್ ಶೆಟ್ಟಿ ಮಾತನಾಡಿ, ಆಟೋ ಚಾಲಕರ ಸಬಲೀಕರಣಕ್ಕೆ ಪಕ್ಷಾತೀತವಾಗಿ ಕೆಲಸಮಾಡಬೇಕು, ಅಸಂಘಟಿತ ಕಾರ್ಮಿಕರಿಗೆ ಸರಕಾರ ಸೂಕ್ತವಾದ ಸವಲತ್ತುಗಳನ್ನು ಒದಗಿಸಲು ಎಲ್ಲರೂ ಶ್ರಮ ವಹಿಸಬೇಕು ಎಂದರು.
ಪ್ರತಿವರ್ಷವು ಸಿನೆಮಾ ನಟರು ಆಟೊ ರಾಯಭಾರಿಗಳಾಗಿರುತ್ತಾರೆ. ಮೊದಲ ವರ್ಷ ರೆಬಲ್ ಸ್ಟಾರ್ ಅಂಬರೀಶ್, ಎರಡನೆ ವರ್ಷ ಕಿಚ್ಚ ಸುದೀಪ್, ಮೂರನೆ ವರ್ಷ ಕರುನಾಡ ಚರ್ಕವರ್ತಿ ಶಿವರಾಜ್ ಕುಮಾರ್ ಆಗಿದ್ದರು, ಈ ವರ್ಷ ದುನಿಯಾ ವಿಜಯ್ ರಾಯಭಾರಿಯಾಗಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಲಹರಿ ವೇಲು, ಆಮ್ ಆದ್ಮಿ ಪಕ್ಷದ ಸಂಚಾಲಕ ಪೃಥ್ವಿರೆಡ್ಡಿ, ಜೆಡಿಎಸ್ ಪಕ್ಷದ ವಕ್ತಾರ ತನ್ವೀರ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆಯಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ, ಆಟೊದಲ್ಲಿ ಮರೆತು ಹೋದ ಬೆಲೆಬಾಳುವ ವಸ್ತುಗಳನ್ನು ಹಿಂದುರುಗಿಸಿ ಆದರ್ಶ ಮೆರೆದ 7 ಜನ ಆಟೋ ಚಾಲಕರಿಗೆ ಚಿನ್ನದ ಪದಕ ಹಾಗೂ ಶಂಕರ್ ನಾಗ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.







