ಸಾಯಿ ಗಾರ್ಮೆಂಟ್ಸ್ ಕಂಪೆನಿ ಮುಚ್ಚದಂತೆ ಒತ್ತಾಯಿಸಿ ಧರಣಿ
ಬೆಂಗಳೂರು, ನ.10: ಕನಕಪುರ ರಸ್ತೆಯ ಪಟ್ಟಾರೆಡ್ಡಿ ಪಾಳ್ಯದಲ್ಲಿರುವ ಸಾಯಿ ಗಾರ್ಮೆಂಟ್ಸ್ ಅನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿ ಗಾರ್ಮೆಂಟ್ಸ್ ನೌಕರರು ಕಂಪೆನಿಯ ಮುಂದೆ ಧರಣಿ ನಡೆಸಿದರು.
ದೇಶಾದ್ಯಂತ ಸಾಯಿ ಗಾರ್ಮೆಂಟ್ಸ್ ಕಂಪೆನಿಯ ನೂರಾರು ಘಟಕಗಳಿದ್ದು, ಅದರಲ್ಲಿ ಕನಕಪುರ ರಸ್ತೆಯಲ್ಲಿರುವ ಸಾಯಿ ಗಾರ್ಮೆಂಟ್ಸ್‌ನ ಘಟಕದಲ್ಲಿ 1500ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ, ಸಾಯಿ ಗಾರ್ಮೆಂಟ್ಸ್ ಅಧಿಕಾರಿಗಳು ಈ ಘಟಕವನ್ನು ಮುಚ್ಚಲು ಉದ್ದೇಶಿಸಿದ್ದಾರೆ. ಇದರಿಂದ ಸಾವಿರಾರು ಜನರ ಬದುಕು ಬೀದಿಪಾಲಾಗಲಿದ್ದು, ಯಾವುದೇ ಕಾರಣಕ್ಕೂ ಗಾರ್ಮೆಂಟ್ಸನ್ನು ಮುಚ್ಚಲು ಬಿಡುವುದಿಲ್ಲ ಎಂದು ಧರಣಿನಿರತರರು ತಿಳಿಸಿದರು.
ಈ ವೇಳೆ ಗಾರ್ಮೆಂಟ್ ಸಂಘದ ನಾಯಕಿ ಪ್ರತಿಭಾ ಮಾತನಾಡಿ, ಕನಕಪುರ ರಸ್ತೆಯಲ್ಲಿರುವ ಸಾಯಿ ಗಾರ್ಮೆಂಟ್ಸ್‌ನ ಬೆಳವಣಿಗೆಯಲ್ಲಿ ಸಾವಿರಾರು ನೌಕರರ ಶ್ರಮವಿದೆ. ಹಾಗೂ ಈ ಗಾರ್ಮೆಂಟ್ಸ್ ಅನ್ನೇ ನಂಬಿ ಸಾವಿರಾರು ಮಹಿಳಾ ನೌಕರರು ಜೀವನ ದೂಡುತ್ತಿದ್ದಾರೆ. ಹೀಗಾಗಿ ಈ ಘಟಕವನ್ನು ಮುಚ್ಚಬಾರದು ಎಂದು ಒತ್ತಾಯಿಸಿದರು.
ಕೃಷಿ ಮಾಡಿ ಬದುಕುತ್ತಿದ್ದ ನಮ್ಮನ್ನು ಬಲವಂತವಾಗಿ ಗಾರ್ಮೆಂಟ್ಸ್‌ಗೆ ಸೇರುವಂತೆ ಮಾಡಿದರು. ಈಗ 10-15ವರ್ಷಗಳ ನಂತರ ನೌಕರರಿಗೆ ಯಾವುದೇ ಮಾಹಿತಿ ಇಲ್ಲದೆ ಕನಕಪುರ ರಸ್ತೆಯಲ್ಲಿರುವ ಗಾರ್ಮೆಂಟ್ಸ್ ಘಟಕವನ್ನು ಮುಚ್ಚಲು ಹೊರಟಿದ್ದಾರೆ. ಕಂಪೆನಿಯ ಮಾಲಕರು ತಮ್ಮ ಸ್ವಾರ್ಥಕ್ಕಾಗಿ ಸಾವಿರಾರು ನೌಕರರ ಜೀವನದಲ್ಲಿ ಚೆಲ್ಲಾಟ ಆಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲಾಧಿಕಾರಿಗಳ ಜತೆ ಚರ್ಚೆ: ಗಾರ್ಮೆಂಟ್ಸ್ ನೌಕರರ ಧರಣಿಯ ಹಿನ್ನೆಲೆಯಲ್ಲಿ ಸಾಯಿ ಕಂಪೆನಿಯ ಅಧಿಕಾರಿಗಳು ಈ ಘಟಕವನ್ನು ತಾತ್ಕಾಲಿಕವಾಗಿ ಮುಂದುವರೆಸಲು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಯಿ ಕಂಪೆನಿಯ ಮೇಲಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







