ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಕ್ರಮ: ರತ್ನಪ್ರಭಾ
ಸರಕಾರಿ ಕಚೇರಿ, ಸಂಸ್ಥೆಗಳಲ್ಲಿ ದೂರು ಸಮಿತಿ ಕಡ್ಡಾಯ
ಬೆಂಗಳೂರು, ನ.10: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಸರಕಾರಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ದೂರು ಸಮಿತಿಯು ಕಡ್ಡಾಯವಾಗಿ ಕೆಲಸ ನಿರ್ವಹಿಸಬೇಕೆಂದು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ತಡೆ ಸಂಬಂಧ ಸ್ಥಾಪಿಸಲಾದ ರಾಜ್ಯ ಮಟ್ಟದ ಸಕ್ಷಮ ಪ್ರಾಧಿಕಾರದ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಅದರಲ್ಲೂ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕು. ಅವರು ಉದ್ಯೋಗದಲ್ಲ್ಲಿದ್ದಾಗ ಯಾವುದೇ ಮಾನಸಿಕ, ದೈಹಿಕ ಕಿರುಕುಳ, ದೌರ್ಜನ್ಯ ಎಸಗಿರುವುದು ಕಂಡು ಬಂದಲ್ಲಿ ಅವರು ಸಮಿತಿಗೆ ದೂರು ನೀಡಬಹುದು ಎಂದರು.
ಎಲ್ಲ ಸರಕಾರಿ ಕಚೇರಿ, ಐಟಿ-ಬಿಟಿ ಸಂಸ್ಥೆಗಳು, ಸಂಘ-ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ತಮಗಾಗಿರುವ ಕಿರುಕುಳದ ಬಗ್ಗೆ ಸ್ಥಾಪಿಸಲಾಗಿರುವ ದೂರು ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣ, ಇಲಾಖೆಯ ವೆಬ್‌ಸೈಟ್, ಸಿಎಂ ಕಚೇರಿ ಆ್ಯಪ್‌ಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ದಿನಪತ್ರಿಕೆ, ಸುದ್ದಿ ವಾಹಿನಿಗಳಲ್ಲಿಯೂ ಈ ಕುರಿತು ಅರಿವು ಮೂಡಿಸಬೇಕು. ಈ ದೂರು ಪ್ರಾಧಿಕಾರದ ಕುರಿತು ನಾಮಫಲಕದಲ್ಲಿ ಎಲ್ಲ ಕಚೇರಿಗಳಲ್ಲಿ ಹಾಕುವುದರ ಮೂಲಕ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸಬಹುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯದಂತೆ ತಡೆಯುವುದು ಪ್ರತಿಯೊಬ್ಬರ ಹೊಣೆ ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮಾತನಾಡಿ, ಸರಕಾರದ 72 ಇಲಾಖೆಗಳಲ್ಲಿ 34 ಇಲಾಖೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಸಮಿತಿಗಳನ್ನು ರಚಿಸಲಾಗಿದೆ. ಮೂವತ್ತು ಜಿಲ್ಲೆಗಳಲ್ಲೂ ಸ್ಥಳೀಯ ಮಹಿಳಾ ದೂರು ಸಮಿತಿ ರಚನೆಯಾಗಿದೆ. 73 ಐಟಿ ಕಂಪೆನಿಗಳಲ್ಲಿ ಮಹಿಳಾ ದೂರು ಸಮಿತಿ ರಚಿಸಲಾಗಿದೆ. ಈ ಕುರಿತು ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಿತಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಸಾಮಾಜಿಕ ಜಾಲತಾಣ, ಮಾಧ್ಯಮಗಳು, ಪೋಸ್ಟರ್ ಇತ್ಯಾದಿಗಳ ಮೂಲಕ ಮಹಿಳೆಯರಿಗೆ ಈ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







