'ಕೆಳದಿ ಚೆನ್ನಮ್ಮ-ಹೊಯ್ಸಳ ಪ್ರಶಸ್ತಿ' ಗೆ 7 ಮಕ್ಕಳು ಆಯ್ಕೆ: ಉಮಾಶ್ರೀ
ದ.ಕ.ಜಿಲ್ಲೆಯ ಇಬ್ಬರು ಮಕ್ಕಳು ಆಯ್ಕೆ

ನ.14ರ ಮಕ್ಕಳ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು, ನ.10: ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಧೈರ್ಯ-ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಹೊಯ್ಸಳ ಹಾಗೂ ಶೌರ್ಯ ಪ್ರದರ್ಶಿಸಿದ ಮಕ್ಕಳಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಏಳು ಮಂದಿ ಚಿಣ್ಣರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಗಂಡು ಮಕ್ಕಳಿಗೆ ನೀಡಲಾಗುವ ಪ್ರಶಸ್ತಿಯನ್ನು ಹೊಯ್ಸಳ ಪ್ರಶಸ್ತಿ ಎಂದು, ಹೆಣ್ಣು ಮಕ್ಕಳಿಗೆ ನೀಡಲಾಗುವ ಪ್ರಶಸ್ತಿಯನ್ನು ಕೆಳದಿ ಚೆನ್ನೆಮ್ಮ ಪ್ರಶಸ್ತಿ ಎಂದು ಕರೆಯಲಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ 10 ಸಾವಿರ ರೂ.ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನ.14ರಂದು ನಡೆಯಲಿರುವ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ರಾಜ್ಯಪಾಲರು ಈ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಬೆಂಗಳೂರಿನ ಕಬ್ಬನ್‌ಪಾರ್ಕಿನ ಆವರಣದಲ್ಲಿನ ಬಾಲಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಆಯ್ಕೆ ಪ್ರಕಟ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಕ್ಕಡ ಅಂಚೆ, ಕೌಕ್ರಾಡಿ ಗ್ರಾಮದ ಕಣ್ಣತ್ತಿಲು ನಿವಾಸಿ ಕೆ.ಆರ್.ನಿತಿನ್ (ಪ್ರಥಮ ಪಿಯುಸಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ತಂಗಿಗೆ 2017ರ ಅಕ್ಟೋಬರ್ 8ರ ಸಂಜೆ 4:30ಕ್ಕೆ ತೋಟದಲ್ಲಿ ವಿಷದ ಹಾವು ಕಡಿದಿದ್ದು, ಆಕೆ ಬೊಬ್ಬಿಡುತ್ತಾ ಮನೆ ಕಡೆಗೆ ಓಡಿ ಬಂದು ವಿಷಯ ತಿಳಿಸಿದಾಗ ಈ ಬಾಲಕ ಆಕೆಯ ಕಾಲಿನ ಗಾಯದ ವಿಷವನ್ನು ಬಾಯಲ್ಲಿ ಹೀರಿ ತೆಗೆಯುವ ಮೂಲಕ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಶಿವಮೊಗ್ಗದ ಸೇವಾಲಾಲ್ ನಗರ, ತ್ರಿಮೂರ್ತಿ ನಗರದ ಸಿ.ಡಿ.ಕೃಷ್ಣನಾಯ್ಕಿ (7ನೆ ತರಗತಿ) ಆಯ್ಕೆಯಾಗಿದ್ದು, ಇವರು 2017ರ ಸೆಪ್ಟಂಬರ್ 24ರಂದು ಶಿವಮೊಗ್ಗದ ನವುಲೆಯ ತ್ರಿಮೂರ್ತಿನಗರದ ತುಂಗಾ ಕಾಲುವೆಯಲ್ಲಿ ನವುಲೆಯ ಸರಕಾರಿ ಪ್ರಾಥಮಿಕ ಶಾಲೆಯ ಅನಿಶ್, ದರ್ಶನ್ ಇಬ್ಬರು ಬಾಲಕರು ಥರ್ಮಾಕೋಲ್ ಸಹಾಯದಿಂದ ಈಜಾಡುತ್ತಿದ್ದಾಗ, ಥರ್ಮಾಕೋಲ್ ಜಾರಿ ನೀರಿನಲ್ಲಿ ತೇಲಿ ಮುಂದಕ್ಕೆ ಹೋಗಿದ್ದು, ಇಬ್ಬರು ಬಾಲಕರು ನೀರಿನಲ್ಲಿ ಮುಳುಗುತ್ತಿದ್ದಾಗ, ನೀರಿಗೆ ಹಾರಿ ಜೀವ ರಕ್ಷಣೆಗೆ ಪ್ರಯತ್ನಿಸಿ, ಇವರಲ್ಲಿ ಒಬ್ಬ ಬಾಲಕನನ್ನು ರಕ್ಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಸಜೀಪ ಮೂಡ ಪೋಸ್ಟ್ ಕೂಡೂರು ನಿವಾಸಿ ವೈಶಾಖ್(6ನೆ ತರಗತಿ) ಇವರು 2016ರ ಅಕ್ಟೋಬರ್ 4ರ ಸಂಜೆ 6 ಗಂಟೆಯ ವೇಳೆಗೆ ಮನೆಗೆ ಮರಳಿ ಬರುತ್ತಿದ್ದಾಗ ಹೆಬ್ಬಾವು ಒಮ್ಮೆಲೆ ಈತನನ್ನು ಸುತ್ತಿಕೊಂಡು ಕೈಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸುತ್ತಿದ್ದಾಗ, ಪಕ್ಕದಲ್ಲಿದ್ದ ಕಲ್ಲನ್ನು ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿ ಕಣ್ಣನ್ನು ಜಖಂಗೊಳಿಸಿ ಹಿಡಿತದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಾಲಕನ ಬೊಬ್ಬೆ ಕೇಳಿ ಸಮೀಪದ ಮನೆಯ ಹರ್ಷಿತಾ ಎಂಬ ಹುಡುಗಿ ಓಡಿ ಬಂದಾಗ ಆಕೆಗೆ ಅಪಾಯವಾಗಬಾರದೆಂದು ಅವಳನ್ನು ಹತ್ತಿರಕ್ಕೆ ಬಾರದಂತೆ ತಡೆದಿದ್ದು, ತನ್ನ ಪ್ರಾಣವನ್ನು ರಕ್ಷಿಸಿಕೊಂಡು ಹುಡುಗಿಯ ಪ್ರಾಣವನ್ನೂ ರಕ್ಷಿಸಿದ್ದಾರೆ.
ಚಾಮರಾಜನಗರದ ಮುಬಾರಕ್ ಮೊಹಲ್ಲಾ ನಿವಾಸಿ ಕು.ಝುನೇರಾ ಹರಂ (2ನೆ ತರಗತಿ) ಇವರು 2017ರ ಜುಲೈ 19ರಂದು ತಮ್ಮ ಚಿಕ್ಕಪ್ಪನ ಮಗಳಾದ ಆಫಿಯಾ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲೇ ಇದ್ದ ನೀರಿನ ಡ್ರಂಗೆ ಆಯತಪ್ಪಿಬಿದ್ದಿದ್ದು, ಸದರಿ ಮಗುವನ್ನು ಮೇಲಕ್ಕೆತ್ತಿ ಮಗುವಿನ ಜೀವ ಕಾಪಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಅಂಚೆ ಹನುಮಂತಪುರದ ನಿವಾಸಿ ದೀಕ್ಷಿತಾ ಎಚ್.ಕೆ.(6ನೆ ತರಗತಿ) ಇವರು 2017ರ ಜೂನ್ 26ರಂದು ಮನೋಜ್ ಎಂಬ 11 ವರ್ಷದ ಬಾಲಕ ಆಟವಾಡುತ್ತಿದ್ದಾಗ ಗೋಬರ್ ಗ್ಯಾಸ್ ಗುಂಡಿಯ ಸಗಣಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗಿದ ಬಾಲಕನ ಕಾಲನ್ನು ಕು. ಅಂಬಿಕಾ ಎಂಬ ಬಾಲಕಿಯ ಸಹಾಯದಿಂದ ಎಳೆದು ಆತನನ್ನು ರಕ್ಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕಿನ ವಡ್ಡರ ಹೊಸೂರು, ಬಲಕುಂದಿ ನಿವಾಸಿ ನೇತ್ರಾವತಿ ಚವ್ಹಾಣಿ ಇವರು 2017ರ ಮೇ 13ರಂದು ಬಟ್ಟೆ ತೊಳೆಯಲು ತಮ್ಮ ಊರಿನ ಪಕ್ಕದ ಕ್ವಾರಿಗೆ ತಮ್ಮ ಮಾವನ ಮಕ್ಕಳಾದ ಮುತ್ತು ರಾಠೋಡ ಹಾಗೂ ಗಣೇಶ ಎಂಬ ಬಾಲಕರ ಜೊತೆ ಹೋಗಿದ್ದಾರೆ. ಈ ಬಾಲಕರು ನೀರಿನಲ್ಲಿ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗುತ್ತಿರುವುದನ್ನು ಗಮನಿಸಿದ ಈ ಬಾಲಕಿ ನೀರಿಗೆ ಹಾರಿ ಒಬ್ಬ ಬಾಲಕನನ್ನು ರಕ್ಷಿಸಿದ್ದಾರೆ. ಮತ್ತೊಬ್ಬ ಬಾಲಕನನ್ನು ರಕ್ಷಿಸಲು ಹೋದಾಗ ಆತ ಪ್ರಾಣ ಭಯದಿಂದ ಬಿಗಿಯಾಗಿ ಈಕೆಯ ಕುತ್ತಿಗೆಯನ್ನು ಹಿಡಿದಿರುವುದರಿಂದ ಈಕೆಯೂ ಬಾಲಕನೊಂದಿಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆಂದು ತಿಳಿಸಿದ್ದಾರೆ.
ಅಸಾಧಾರಣ ಪುರಸ್ಕಾರ: ಅಸಾಧಾರಣ ಪ್ರತಿಭೆ ಹೊಂದಿರುವ 35 ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಿದ್ದು, ಅವರೆಲ್ಲರನ್ನು ರಾಜ್ಯ ಮಟ್ಟದಲ್ಲಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆಯಲ್ಲಿ ಉಮಾಶ್ರೀ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ‘ಮಕ್ಕಳ ಕಲ್ಯಾಣ ಪ್ರಶಸ್ತಿ’ ನೀಡುತ್ತಿದ್ದ ನಾಲ್ಕು ಸಂಸ್ಥೆಗಳು ಹಾಗೂ ನಾಲ್ವರು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು 1ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ವೈಯಕ್ತಿಕ ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
-ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ







