ದಾಖಲೆಯ ಪ್ರಯತ್ನಕ್ಕಾಗಿ ಪ್ರಧೀಶ್‌ಗೆ ಅಭಿನಂದನೆ

ಕೋಟ, ನ.10: ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮಾತೊಂದಿದೆ. ಇಂದು ಪ್ರಧೀಶ್ ಮಾಡಿರುವ ದಾಖಲೆಯನ್ನು ಈತನೇ ಮುರಿದು ಹೊಸ ದಾಖಲೆ ಬರೆಯಲಿ. ಕೋಟ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಯೋರ್ವನ ಈ ಸಾಧನೆಯಿಂದ ಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಶುಕ್ರವಾರದಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಕಳೆದ ಸತತ 4 ದಿನಗಳಿಂದ ಕಾಲೇಜಿನ ವಿದ್ಯಾರ್ಥಿ ಪ್ರಧೀಶ್ ಕೆ. ‘ಲಾಂಗೆಸ್ಟ್ ಡ್ರಾಯಿಂಗ್ ಬೈ ಆನ್ ಇನ್‌ಡಿವಿಜುವಲ್’ ವಿಭಾಗ ದಲ್ಲಿ ಸ್ವಚ್ಛ ಭಾರತ್ ಕಲ್ಪನೆಯಡಿ ರಚಿಸಿರುವ ಸುಮಾರು 1000 ಮೀಟರ್ ಉದ್ದದ ಚಿತ್ರದ ಮೂಲಕ ಗಿನ್ನಿಸ್ ವಿಶ್ವ ದಾಖಲೆಗಾಗಿ ನಡೆಸಿದ ಪ್ರಯತ್ನಕ್ಕಾಗಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸಂಜೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ವೇದಿಕೆಯಲ್ಲಿ ಗಿನ್ನಿಸ್ ಸಾಧನೆಗಾಗಿ ಪ್ರಯತ್ನ ನಡೆಸಿದ ಪ್ರದೀಶ್ ಕೆ. ಅವರನ್ನು ಅಭಿನಂದಿಸಿ, ಶೀಘ್ರವೇ ಗಿನ್ನಿಸ್ ಸಂಸ್ಥೆಯ ಮನ್ನಣೆ ಸಿಲಿ ಎಂದು ಶುಭ ಹಾರೈಸ ಲಾಯಿತು.
ಕಾರ್ಯಕ್ರಮದಲ್ಲಿ ಕೋಟ ವಿವೇಕ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರಭಾಕರ ಮಯ್ಯ, ಸಾಯಿರಾಧ ಸಂಸ್ಥೆಯ ಮನೋಹರ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಉದ್ಯಮಿ ಧನಂಜಯ ಅಮೀನ್, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಟ ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಾಯ ಆಚಾರ್ಯ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ವ್ಯಾಸರಾಯ ಆಚಾರ್ಯ, ವಿವೇಕ ವಿದ್ಯಾ ಸಂಸ್ಥೆಯ ಮೂರು ವಿಭಾಗಗಳ ಮುಖ್ಯಸ್ಥರಾದ ವೆಂಕಟೇಶ್ ಉಡುಪ, ಶ್ರೀಪತಿ ಹೇರ್ಳೆ, ಜಗದೀಶ ಹೊಳ್ಳ ಉಪಸ್ಥಿತರಿದ್ದರು.
ಸಾಧನೆಯನ್ನು ಸಾಕ್ಷೀಕರಿಸಲು ಆಗಮಿಸಿದ ಪ್ರಖ್ಯಾತ ಕಲಾವಿದ ರಮೇಶ್ ರಾವ್, ಉಡುಪಿ ಲೋಕಪಯೋಗಿ ಇಲಾಖೆಯ ಎಇಇ ಡಿ.ವಿ.ಹೆಗ್ಡೆ, ಗಿನ್ನಿಸ್ ದಾಖಲೆಯ ಈಜುಪಟು ಗೋಪಾಲ್ ಖಾರ್ವಿ, ನೋಟರಿ ಕೆ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಪ್ರಧೀಶ್ ಪೋಷಕರಾದ ಕೆ.ಶ್ಯಾಮ ಪ್ರಸಾದ್ ಮತ್ತು ಪ್ರಸನ್ನ ಪ್ರಸಾದ್, ಸಹೋದರ ಪ್ರಥ್ವೀಶ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕರಾದ ಶಿವಪ್ರಸಾದ ಕಾರ್ಯಕ್ರಮ ನಿರೂಪಿಸಿ, ಸಂಜೀವ ಗುಂಡ್ಮಿ ವಂದಿಸಿದರು.







