'ಉಳುವವನೆ ಹೊಲದ ಒಡೆಯ' ಎಂಬ ಪರಿಕಲ್ಪನೆ ಮೊದಲಿಗೆ ತಂದವರು ಟಿಪ್ಪು: ಡಾ.ಮಹದೇವಪ್ಪ

ಮೈಸೂರು, ನ.10: ಮೈಸೂರು ಹುಲಿ ಟಿಪ್ಪು ಸುಲ್ತಾನ್ ದೇಶ ಹೆಮ್ಮೆ ಪಡುವ ಸ್ವಾತಂತ್ರ್ಯ ಹೋರಾಟಗಾರ. ಅಸಹಾಯಕರು ಹಾಗೂ ಗುಲಾಮಗಿರಿ ಅನುಭವಿಸಿದ ಜನರ ವಿಮೋಚನೆಗೆ ಭೂಸುಧಾರಣೆ ತಂದ ಮಹಾನ್ ನಾಯಕ ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ಹುಲಿ ಹಝರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ, ದೇಶ ಜನತೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸುವ ಪ್ರಯತ್ನ ಮೊದಲು ಮಾಡಿದ್ದು ಟಿಪ್ಪು ಎಂದರು.
ಪ್ರಪಂಚದಲ್ಲಿ ಯಾವುದೇ ಧರ್ಮ ಮೇಲು ಕೀಳು ಅಲ್ಲ. ದಯವೇ ಧರ್ಮದ ಮೂಲ ಎಲ್ಲರು ಸಮಾನರು ಎಲ್ಲರು ಸಹೋದರರು ಎಂಬ ಆಶಯ ಇಟ್ಟುಕೊಂಡು ಆಡಳಿತ ಮಾಡಿದರು ಎಂದು ತಿಳಿಸಿದರು.
ಕೆಲವರು ಟಿಪ್ಪುವನ್ನು ಧರ್ಮಾಂಧ ಮತಾಂಧ, ದೇಶ ದ್ರೋಹಿ ಎನ್ನುತ್ತಿದ್ದಾರೆ. ಏಕೆ ಎಂದು ಪ್ರಶ್ನಿಸಿದ ಅವರು, ಟಿಪ್ಪು ವೈದಿಕರನ್ನು, ಯಥಾಸ್ಥಿತಿವಾದಿಗಳಿಂದ ಜಮೀನನ್ನು ಬಿಡಿಸಿ, ಅಸಹಾಯಕರು, ದಲಿತರು, ಬಡವರು ಹಾಗೂ ಗುಲಾಮಗಿರಿ ಅನುಭವಿಸಿದವರಿಗೆ ನೀಡಿದರು ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಬಹುಭಾಷಾ ಪಂಡಿತರು ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ್ದರು ಪರಕೀಯರ ವಸ್ತುಗಳನ್ನು ನಿರಾಕರಣೆ ಮಾಡಿದ ಮೊದಲಿಗರು, ಅವರ ನಿಲುವು ಸ್ವದೇಶಿ ಘೋಷಣೆ, ಅವರ ಆಡಳಿತ ವೈಖರಿ ಸ್ವದೇಶಿ ಆಗಿತ್ತು. ಅವರ ಆಡಳಿತ ಅವಧಿಯಲ್ಲಿ ಬಹುತೇಕ ಜನರು ಹಿಂದುಗಳು, ದಿವಾನ್ ಪೂರ್ಣಯ್ಯ, ಶ್ಯಾಮರಾಯರು ಸೇರಿದಂತೆ ಸೈನ್ಯದ ಅರ್ಧಭಾಗ ಹಿಂದೂಗಳೇ ತುಂಬಿದ್ದರು, ಟಿಪ್ಪು ಸುಲ್ತಾನ್ ಮತಾಂಧರಾಗಿದ್ದರೆ ಇವರನ್ನು ಏಕೆ ಇಟ್ಟು ಕೊಳ್ಳುತ್ತಿದ್ದರು ಎಂದರು.
ಬ್ರಿಟಿಷರು ಭಾರತವನ್ನು ವಶಪಡಿಸಿಕೊಳ್ಳುತ್ತಾರೆ ಎಂದು ಮೊದಲು ಗ್ರಹಿಸಿದ್ದು ಟಿಪ್ಪು. ಅದಕ್ಕಾಗಿ ಅವರು ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸಿ, ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಪ್ರಯತ್ನ ಮಾಡಿದರು. ಅವರನ್ನು ಎದುರಿಸಲು ರಾಕೇಟ್ ತಂತ್ರಜ್ಞಾನದ ಸಂಶೋಧನೆಗೆ ಒತ್ತು ನೀಡಿದರು.
ಕೃಷಿ ನೀತಿಯನ್ನು ತಂದು ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದ ಅವರು, ಕೈಗಾರಿಕೆ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿಗಾರಿಕೆ ಇವರ ಕಾಲದಲ್ಲೆ ಪ್ರಾರಂಭವಾಯಿತು. ಅಲ್ಲದೆ, ಟಿಪ್ಪು ಭೂಸುಧಾರಣೆ ಮೊದಲು ತಂದು, ಕಾಯ್ದೆಯ 11ನೆ ಕಲಂನಲ್ಲಿ ಪಟೇಲರ ಪದ್ಧತಿ ರದ್ದು ಮಾಡಿದರು, 12ನೆ ಕಲಂನಲ್ಲಿ ಶ್ಯಾನುಭೋಗರ ಮಾಡುತ್ತಿದ್ದ ಕೆಲಸವನ್ನು ಪ್ರಗತಿಪರ ರೈತರಿಗೆ ನೀಡಿದರು ಎಂದು ವಿವರಿಸಿದರು.
ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಪ್ರೇರಣೆ ನೀಡಿ ಶೇ.35% ಕೃಷಿ ನೀರಾವರಿಗೆ ಒಳಪಟ್ಟಿತ್ತು ವ್ಯವಸಾಯದಲ್ಲಿ ಭೂಕಂದಾಯ ಪದ್ಧತಿ ತಂದು ಬಲಹೀನರು, ದಲಿತರು, ಹಿಂದುಳಿದವರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು, ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ದೇವಸ್ಥಾನದ ಗಂಟೆ ನಾದ ಮತ್ತು ಮಸೀದಿಯ ಪ್ರಾರ್ಥನೆಯನ್ನು ಒಟ್ಟಿಗೆ ಆಲಿಸುತ್ತಿದ್ದರು ಎಂದರು.
ಧರ್ಮಾಂಧನಾಗಿದ್ದರೆ ಮೇಲುಕೋಟೆ ಶ್ರೀರಂಗಪಟ್ಟಣದಲ್ಲಿ ಹಿಂದೂ ದೇವಾಲಯಗಳನ್ನು ಕೆಡವಿದ್ದಾರಾ? ಪದ್ಮನಾಭ ದೇವಸ್ಥಾನದ ಸಂಪತ್ತನ್ನು ಕಿತ್ತುಕೊಳ್ಳಬಹುದಿತ್ತು. ಹಾಗೆ ಮಾಡಿದರಾ ಎಂದು ಪ್ರಶ್ನಿಸಿದರು.
ಟಿಪ್ಪು ವಿಲಾಸಿ ಜೀವನಕ್ಕೆ ಅವಕಾಶ ಕೊಡಲಿಲ್ಲ. ಗಣೇಶ ದೇವಸ್ಥಾನ ಪಕ್ಕದಲ್ಲೇ ಸರಳವಾಗಿ ವಾಸವಿದ್ದರು. ಮಧ್ಯವರ್ತಿಗಳು ಇಲ್ಲದ ಆಡಳಿತ ಅವರ ಗುರಿ, ದೇಶಕ್ಕಾಗಿ ಮಕ್ಕಳನ್ನು ಒತ್ತೆ ಹಿಟ್ಟಿದ್ದು ಪ್ರಪಂಚದ ಇತಿಹಾಸದಲ್ಲೇ ಟಿಪ್ಪು ಒಬ್ಬರೆ ಎಂದರು.
ಬೀಳು ಭೂಮಿಯನ್ನು ಬಡವರಿಗೆ ಕೊಟ್ಟು ಕೃಷಿ ಮಾಡಿಸಿದರು. ಮಹಾತ್ಮ ಗಾಂಧಿಯವರ “ಯಂಗ್ ಇಂಡಿಯಾ” ದಲ್ಲಿ ಟಿಪ್ಪು ಹಿಂದೂ ಮತ್ತು ಮುಸ್ಲಿಮರ ಐಕ್ಯತೆಯ ಕೊಂಡಿ ಎಂದು ಹೇಳಿದ್ದಾರೆ. ಅವರ ಹುಂಗುರದಲ್ಲಿ ಲಕ್ಷ್ಮಿದೇವಿ ಇತ್ತು, ಧರ್ಮಾಂಧನಾಗಿದ್ದರೆ ಏಕೆ ಲಕ್ಷ್ಮದೇವಿ ಇಟ್ಟುಕೊಳ್ಳುತ್ತಿದ್ದರು. ಉಳುವವನೆ ಹೊಲದ ಒಡೆಯ ಎಂಬ ಪರಿಕಲ್ಪನೆಯನ್ನು ಮೊದಲಿಗೆ ತಂದವರು ಟಿಪ್ಪು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಹಜರತ್ ಮೌಲಾನ್ ಮೊಹಮ್ಮದ್ ಜಕಾವುಲ್ಲ ವಹಿಸಿದ್ದರು. ವಿಧಾನಪರಿಷತ್ ಉಪಸಭಾಪತಿ ಮರೀತಿಬ್ಬೇಗೌಡ, ಶಾಕರಾದ ಎಂ.ಕೆ ಸೋಮಶೇಖರ್, ವಾಸು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್, ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಎಂ ವೆಂಕಟೇಶ್, ಮಹಾಪೌರ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ರಂದೀಪ್.ಡಿ, ಮುಖ್ಯ ಭಾಷಣಕಾರರಾದ ಬೂದನೂರು ಪುಟ್ಟಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.







