ಪೊಲೀಸ್ ಕುಟುಂಬದಿಂದ ‘ರಕ್ಷಕ ಸೇನಾ’ ಹೊಸ ರಾಜಕೀಯ ಪಕ್ಷ
ಉಡುಪಿ, ನ.10: ರಾಷ್ಟ್ರೀಯ ಸುರಕ್ಷತೆ ಮತ್ತು ಐಕ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪೊಲೀಸ್ ಕುಟುಂಬಗಳು ಕಟ್ಟಿರುವ ‘ರಕ್ಷಕ ಸೇನಾ’ ಹೊಸ ರಾಜ ಕೀಯ ಪಕ್ಷವನ್ನು ಕೇಂದ್ರೀಯ ಚುನಾವಣಾ ಆಯೋಗದಿಂದ ನೊಂದಾಯಿಸ ಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಸಂಘಟನೆಯನ್ನು ಮಾಡಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೈಸೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲಾ ಪ್ರವಾಸ ನಡೆಸಿದ್ದು, ಇದೀಗ ಉಡುಪಿ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಸೈನಿಕ ಕುಟುಂಬ, ರೈತರು, ಶೋಷಿತರು, ವಿದ್ಯಾರ್ಥಿಗಳ ಬೆಂಬಲ ಪಡೆದು ಉದ್ದೇಶಿತ ರಾಜಕೀಯ ಪಕ್ಷವನ್ನು ರಾಷ್ಟ್ರ ವ್ಯಾಪಿ ಮುನ್ನಡೆಸಲಾಗುವುದು ಎಂದರು.
ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಆದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರ್ಡರ್ಲಿ ವ್ಯವಸ್ಥೆ ಇನ್ನು ಜಾರಿಯಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ. ಆಯಕಟ್ಟಿನ ವರ್ಗಾವಣೆ ಯಲ್ಲಿ ಸಚಿವರು, ಶಾಸಕರ ಶಿಫಾರಸು ಹೆಚ್ಚುತ್ತಿದ್ದು, ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಪೊಲೀಸ್ ಸಿಬ್ಬಂದಿ ಸಂದೀಪ್ ಕುಮಾರ್, ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಸುರೇಶ್ ಶೇರಿಗಾರ್, ಕರವೇ ಸಂಘಟನೆಯ ಸಂತೋಷ್, ಅಭಿಲಾಷ್, ಸಿಪಿಎಂನ ವಿದ್ಯಾರಾಜ್ ಮೊದಲಾದವರು ಹಾಜರಿದ್ದರು.







