ಪದ್ಮಾವತಿಯ ಹಿಂದೆ ‘ಅಂತಾರಾಷ್ಟ್ರೀಯ ಪಿತೂರಿ’ ಕಂಡುಹಿಡಿದ ಸುಬ್ರಹ್ಮಣ್ಯನ್ ಸ್ವಾಮಿ !

ಹೊಸದಿಲ್ಲಿ, ನ.10: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾದ ಹಿಂದೆ ‘ಅಂತಾರಾಷ್ಟ್ರೀಯ ಪಿತೂರಿ’ಯಿರಬಹುದು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ತಿಳಿಸಿದ್ದಾರೆ.
‘ಪದ್ಮಾವತಿ’ ಸಿನಿಮಾದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಿರುವ ಸ್ವಾಮಿ ಈ ಚಿತ್ರದ ಹಿಂದೆ ‘ಅಂತಾರಾಷ್ಟ್ರೀಯ ಪಿತೂರಿ’ ಇರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಲವು ದೊಡ್ಡ ಬಜೆಟ್‌ನ ಸಿನಿಮಾಗಳು ಬರುತ್ತಿವೆ. ಈ ಬಗ್ಗೆ ತನಿಖೆಯಾಗಬೇಕು. ದುಬೈಯ ಜನರು ಮುಸ್ಲಿಮ್ ರಾಜರನ್ನು ಹೀರೋಗಳಂತೆ ನೋಡಲು ಬಯಸುತ್ತಾರೆ. ಹಿಂದೂ ಮಹಿಳೆಯರು ಅವರ ಜೊತೆ ಸಂಬಂಧ ಬೆಳೆಸಲು ಬಯಸುತ್ತಿದ್ದರು ಎಂಬಂತೆ ಬಿಂಬಿಸಲು ಅವರು ಬಯಸುತ್ತಾರೆ ಎಂದು ತಿಳಿಸಿದರು.
ಇದು ಪದ್ಮಿನಿಯನ್ನು ಕೆಟ್ಟ ರೀತಿಯಲ್ಲಿ ತೋರಿಸಲು ನಡೆದಿರುವ ಹುನ್ನಾರವಾಗಿದೆ. ಜೋಧಾ ಬಾಯಿ ವಿಷಯದಲ್ಲೂ ಅವರು ಹೀಗೆಯೇ ಮಾಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಅಂಥಾ ಅನೇಕ ಸಿನಿಮಾಗಳು ಬಂದಿವೆ. ಯುಪಿಎ ಸರಕಾರದ ಅವಧಿಯಲ್ಲಿ ಅಂಥಾ ವಿಷಯಗಳಿಗೆ ಬೆಂಬಲ ಸಿಗುತ್ತಿತ್ತು ಎಂದು ಸ್ವಾಮಿ ತಿಳಿಸಿದರು.
ಪದ್ಮಾವತಿ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಹಾಕಲಾಗಿರುವ ಅರ್ಜಿಯನ್ನು ಶುಕ್ರವಾರದಂದು ನ್ಯಾಯಾಲಯ ತಳ್ಳಿಹಾಕಿದೆ. ಈ ಚಿತ್ರಕ್ಕೆ ಸಿನಿಮಾ ಪ್ರಮಾಣೀಕರಣ ಕೇಂದ್ರ ಮಂಡಳಿ (ಸಿಬಿಎಫ್‌ಸಿ) ಯು ಇನ್ನೂ ಪ್ರಮಾಣ ಪತ್ರ ನೀಡಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.







