ಟಿಪ್ಪುಸುಲ್ತಾನ್ ಇತಿಹಾಸವನ್ನು ತಿರುಚಲಾಗಿದೆ: ಇಸ್ಮತ್ ಫಜೀರ್

ಮಂಗಳೂರು, ನ. 10: ಟಿಪ್ಪು ಸುಲ್ತಾನ್ ಒಬ್ಬ ನಿಷ್ಠಾವಂತ ಆಡಳಿತಗಾರ. ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಬರಹಗಾರ, ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧಕ ಇಸ್ಮತ್ ಫಜೀರ್ ಹೇಳಿದರು.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಉಳ್ಳಾಲ ಘಟಕದ ವತಿಯಿಂದ ತೊಕ್ಕೊಟ್ಟುನಲ್ಲಿರುವ ಎಸ್‌ಐಒ ಕಚೇರಿಯಲ್ಲಿ ನಡೆದ ‘ಟಿಪ್ಪು ಸುಲ್ತಾನ್ ಚರಿತ್ರೆ ಶ್ಲೇಷಣೆ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮಂದಿರಗಳನ್ನು ಒಡೆದಿರುವನು, ಮತಾಂತರ ಮಾಡಿದನು ಎಂಬುದು ಇತಿಹಾಸದಲ್ಲಿ ದಾಖಲೆಗಳಿಲ್ಲದ ಸುಳ್ಳಾರೋಪಗಳು. ಮರಾಠರು ಅಕ್ರಮಣ ಮಾಡಿದ ಶೃಂಗೇರಿ ದೇವಾಲಯದ ರಕ್ಷಣೆಯ ಹೊಣೆ ಹೊತ್ತವನು ಟಿಪ್ಪು ಸುಲ್ತಾನ್. ಹಲವಾರು ದೇವಾಲಯಗಳಿಗೆ ಕಾಣಿಕೆಗಳನ್ನು ಕೊಟ್ಟಿರುವ ಸಾಕ್ಷಿಗಳಿವೆ. ಟಿಪ್ಪು ಸುಲ್ತಾನ್‌ರ ಚರಿತ್ರೆ ಬರೆದವರು ಒಳ್ಳೆಯ ರೀತಿಯಲ್ಲಿ ಬರೆದಿದ್ದಾರೆ. ಆದರೆ, ರಾಜಕೀಯ ಲಾಭಕ್ಕಾಗಿ ಅದರ ದುರುಪಯೋಗ ನಡೆಯುತ್ತಿದೆ ಎಂದರು.
ಎಸ್.ಐ.ಒ ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಳ್ಳಾಲ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಆಲಿಯಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಉಪಸ್ಥಿತರಿದ್ದರು. ಶಾಹಿಲ್ ಕಿರಾಅತ್ ಪಠಿಸಿದರು, ಸಯ್ಯಿಫ್ ವಂದಿಸಿದರು. ಶಕೀಬ್ ಕಾರ್ಯಕ್ರಮ ನಿರೂಪಿಸಿದರು.





