ಹಿಮಾಚಲ ಪ್ರದೇಶ ಚುನಾವಣೆ: 129 ಬೂತ್‌ಗಳಲ್ಲಿ ಕೈಕೊಟ್ಟ ವೋಟಿಂಗ್ ಮೆಷಿನ್

ಡಾರ್ಜಿಲಿಂಗ್, ನ.10: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಪರಿಚಯಿಸಲಾಗಿರುವ ವೋಟರ್ ವೆರಿಫಯೆಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪೆಎಟಿ) ಯಂತ್ರಗಳು ಹಲವೆಡೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಲವು ಗಂಟೆಗಳ ಮತದಾನವನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು.
ಈ ಯಂತ್ರಗಳ ಪರೀಕ್ಷೆಯ ಸಮಯದಲ್ಲಿ ನಡೆಸಿದ ನಕಲಿ ಮತದಾನದ ವೇಳೆ 218 ಮತದಾನದ ಬೂತ್‌ಗಳಲ್ಲಿ 347 ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದವು. ಆದರೆ ಗುರುವಾರದಂದು ಬೆಳಿಗ್ಗೆ ಎಂಟು ಗಂಟೆಗೆ ಮತದಾನ ನಡೆಯುವ ವೇಳೆ 129 ಕಡೆಗಳಲ್ಲಿ ಈ ಯಂತ್ರಗಳು ಕೈಕೊಟ್ಟಿರುವುದಾಗಿ ಚುನಾವಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ರಾಜ್ಯಾದ್ಯಂತ 68 ಚುನಾವಣಾ ಕ್ಷೇತ್ರಗಳ 7,525 ಮತದಾನ ಕೇಂದ್ರಗಳಲ್ಲಿ 11,115 ವಿವಿಪಿಎಟಿ ಯಂತ್ರಗಳನ್ನು ಅಳವಡಿಸಿದ್ದರು. ಈ ಯಂತ್ರದಲ್ಲಿ ಮತದಾನ ಮಾಡಲಾಗುವ ಯಂತ್ರಕ್ಕೆ ಪ್ರಿಂಟರ್‌ವೊಂದನ್ನು ಅಳವಡಿಸಿ ಯಂತ್ರದ ಒಳಗಿಡಲಾಗಿರುತ್ತದೆ. ಇದರಲ್ಲಿ ಮತದಾನ ನಡೆಸಿದ ಬಗ್ಗೆ ವಿವರವಿರುವ ಪೇಪರ್ ರಶೀದಿಯು ಏಳು ಸೆಕೆಂಡ್‌ಗಳ ವರೆಗೆ ಕಾಣಿಸುತ್ತದೆ.
ಈ ಯಂತ್ರದಲ್ಲಿ ಮತ ದಾಖಲಾಗುವುದರ ಜೊತೆಗೆ ಮುದ್ರಿತ ರಶೀದಿಯಲ್ಲಿ ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಲಾಛನ ಕೂಡಾ ನಮೂದಾಗಿರುತ್ತದೆ. ಮತದಾನದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಮೂಡಿದಲ್ಲಿ ವೋಟಿಂಗ್ ಮೆಷಿನ್‌ನಲ್ಲಿ ದಾಖಲಾಗಿರುವ ಮತಗಳ ಸಂಖ್ಯೆ ಮತ್ತು ರಶೀದಿಯಲ್ಲಿ ನಮೂದಾಗಿರುವ ಮತಗಳನ್ನು ಲೆಕ್ಕಹಾಕಬಹುದಾಗಿದೆ.
ಮತಯಂತ್ರಗಳಲ್ಲಿ ಕೆಲವೆಡೆ ಲೋಪಗಳು ಕಂಡುಬಂದಿರುವುದನ್ನು ಒಪ್ಪಿಕೊಂಡಿರುವ ಮುಖ್ಯ ಚುನಾವಣಾ ಅಧಿಕಾರಿ ಪುಷ್ಪೇಂದ್ರ ರಜಪೂತ್, ಅವುಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ವಿವಿಪಿಎಟಿ ಯಂತ್ರಗಳ ಬಗ್ಗೆ ಇರುವ ಊಹಾಪೋಹಗಳನ್ನು ಸರಿಪಡಿಸಲು ಆಯೋಗವು ಚುನಾವಣೆಗೂ ಮುನ್ನವೇ ರಾಜ್ಯಾದ್ಯಂತ ಅಭಿಯಾನ ನಡೆಸಿತ್ತು. ಆದರೆ ಕೆಲವೆಡೆಗಳಲ್ಲಿ ಚುನಾವಣಾ ಸಿಬ್ಬಂದಿ ಈ ಯಂತ್ರಗಳನ್ನು ನಿಭಾಯಿಸಲು ವಿಫಲರಾದರು ಎಂದು ರಜಪೂತ್ ತಿಳಿಸಿದ್ದಾರೆ.
ಬಿಸಾಪುರದ ಡೆಲೆಗ್‌ನಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ ಮತದಾನ ಆರಂಭವಾಗಲಿಲ್ಲ. ಲಹೌಲ್ ಸ್ಪಿತಿ ಕಣಿವೆಯ ಉಪವಿಭಾಗೀಯ ಮುಖ್ಯ ಕಚೇರಿಯಿರುವ ಕಾಝಾ ಹಾಗೂ ಸ್ಪಿತಿ ಜಿಲ್ಲೆಯಲ್ಲೂ ಮತದಾರರು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದರು.
ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು ಅದನ್ನು ಸರಿಪಡಿಸಲು ಒಂದು ಗಂಟೆ ಬೇಕಾಯಿತು. ಮತ್ತೆ ನಾಲ್ಕು ಗಂಟೆಯ ಹೊತ್ತಿಗೆ ಯಂತ್ರದಲ್ಲಿ ದೋಷ ಕಾಣಿಸಿಕೊಂಡ ಕಾರಣ ಮತದಾನ ಮತ್ತಷ್ಟು ವಿಳಂಬವಾಯಿತು ಎಂದು ತೆನ್ಝಿನ್ ಎಂಬವರು ತಿಳಿಸಿದ್ದಾರೆ. ಕಾಂಗ್ರಾ, ಮಂಡಿ, ಶಿಮ್ಲಾ ಮತ್ತು ಸಿರ್ವೌರ್ ಜಿಲ್ಲೆಗಳಲ್ಲೂ ಇದೇ ರೀತಿಯ ರಿಸ್ಥಿತಿ ಎದುರಾದ ಬಗ್ಗೆ ವರದಿಯಾಗಿವೆ.
ಬಿಜೆಪಿ ಮತ್ತು ಕಾಂಗ್ರೇಸ್ ಮಧ್ಯೆ ನೇರ ಹಣಾಹಣಿಯಿರುವ ಹಿಮಾಚಲ ಪ್ರದೇಶದಲ್ಲಿ ಐದು ಮಿಲಿಯನ್ ಮತದಾರರಿದ್ದು ಶೇಕಡಾ 74 ಮತದಾನವಾಗಿದೆ. 68 ವಿಧಾನಸಭಾ ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದು ಡಿಸೆಂಬರ್ 18ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.







