ಅಸಮರ್ಪಕ ಹೆದ್ದಾರಿ ನಿರ್ವಹಣೆ: ಸಚಿವರ ಅಸಮಾಧಾನ

ಮಂಗಳೂರು, ನ. 10: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ನಿರ್ವಹಣೆಯ ಬಗ್ಗೆ ತೀವ್ರ ನಿರ್ಲಕ್ಷ ವಹಿಸುತ್ತಿರುವ ಬಗ್ಗೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಸಮರ್ಪಕವಾಗಿ ನಿರ್ವಹಿಸಲು ಹಲವು ಸಭೆಗಳನ್ನು ನಡೆಸಿ ಸೂಚಿಸಲಾಗಿತ್ತು. ಆದರೂ ಹೆದ್ದಾರಿ ಪ್ರಾಧಿಕಾರವು ನಿರ್ಲಕ್ಷ ವಹಿಸುತ್ತಿದೆ. ಸಾರ್ವಜನಿಕರು ಪ್ರತಿನಿತ್ಯ ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬಿ.ಸಿ.ರೋಡ್ - ಸುರತ್ಕಲ್ ಹೆದ್ದಾರಿ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಕ್ತಾಯಗೊಂಡಿಲ್ಲ ಎಂದು ಸಚಿವರು ತಿಳಿಸಿದರು.
ಬಿ.ಸಿ. ರೋಡ್ ಮೇಲ್ಸೇತುವೆಯನ್ನು ಮೂಲ ವಿನ್ಯಾಸದಂತೆ ಕೈಕಂಬವರೆಗೆ ವಿಸ್ತರಿಸಲು ಅವರು ಸೂಚಿಸಿದರು. ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ತೊಕ್ಕೊಟು ಜಂಕ್ಷನ್‌ನಲ್ಲಿ ಹೆದ್ದಾರಿ ಪ್ರಾಧಿಕಾರದ ನಿಧಾನಗತಿಯ ಕಾಮಗಾರಿಯಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತಿದೆ. ಈಗಾಗಲೇ ಹಲವು ಮಂದಿ ಇಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಣ್ಣ ಪುಟ್ಟ ಕಾಮಗಾರಿಗಳಿಗೂ ವರ್ಷಗಟ್ಟಲೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಬಿ.ಎ. ಮೊಯ್ದಿನ್ ಬಾವಾ ಮಾತನಾಡಿ, ಬೈಕಂಪಾಡಿ- ಕೂಳೂರು ನಡುವೆ ಹೆದ್ದಾರಿಯಲ್ಲಿ ಗುಂಡಿ ಮುಚ್ಚಲು ಹಲವು ಬಾರಿ ಸೂಚಿಸಲಾಗಿತ್ತು. ಮುಕ್ಕ ಜಂಕ್ಷನ್ ಬಸ್ ಸ್ಟಾಂಡ್ ಹಾಗೂ ಗುರುಪುರ ಸೇತುವೆ ದುರಸ್ತಿ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಲು ಸಭೆಯಲ್ಲಿ ಹೇಳಿದರು.
ಜಿಲ್ಲಾಧಿಕಾರಿ ಸಸಿಕುಮಾರ್ ಸೆಂಥಿಲ್ ಅವರು ಮಾತನಾಡಿ, ಹೆದ್ದಾರಿ ಪ್ರಾಧಿಕಾರವು ಜಿಲ್ಲಾಡಳಿತದೊಂದಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಸೂಕ್ತ ಕ್ರಮ ಕೈಗೊಳ್ಳಬೇಕಾ ಗುತ್ತದೆ. ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತಿರುವ ಕಾರಣಕ್ಕೆ ಕೇಸು ದಾಖಲಿಸಿ, ಕಾಮಗಾರಿ ಯಂತ್ರೋಪಕರಣಗಳನ್ನು ವಶಪಡಿಸಬೇಕಾದೀತು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಬಗ್ಗೆ ಇನ್ನು ಮುಂದೆ ಪ್ರತಿ ತಿಂಗಳು ಸಭೆ ನಡೆಸಿ ಪರಿಶೀಲಿಸಲಾಗುವುದು. ಹೆದ್ದಾರಿ ಪ್ರಾಧಿಕಾರವು ಸಮಸ್ಯೆಗಳೇನಾದರೂ ಇದ್ದಲ್ಲಿ ಜಿಲ್ಲಾಡಳಿತ ದ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಸಭೆಗೆ ಉತ್ತರಿಸಿದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ತೊಕ್ಕೊಟು ಮೇಲ್ಸೇತುವೆ ಕಾಮಗಾರಿ ಮುಂದಿನ ಮಾರ್ಚ್ ವೇಳೆಗೆ ಮುಗಿಯಲಿದೆ ಎಂದರು. ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ಆರಂಭಕ್ಕೆ ಮುನ್ನ ಸಭೆ ನಡೆಸುವಂತೆ ಸಚಿವ ರಮಾನಾಥ ರೈ ಸೂಚಿಸಿದರು. ಸಭೆಯಲ್ಲಿ ಜಿ.ಪಂ. ಸಿಇಒ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಶಾಸಕ ಮೊಯ್ದಿನ್ ಬಾವ ಉಪಸ್ಥಿತರಿದ್ದರು.







