ಮಂಗಳೂರು: ಹೆಚ್ಚುವರಿ ಆಧಾರ್ ಕೇಂದ್ರ ಆರಂಭಿಸಲು ಮನವಿ
ಮಂಗಳೂರು, ನ. 10: ಆಧಾರ್ ಕೇಂದ್ರಗಳ ಕೊರತೆಯಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಹೆಚ್ಚುವರಿ ಆಧಾರ್ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸದೆ.
ಸರಕಾರವು ಜನರ ಎಲ್ಲಾ ವ್ಯವಹಾರಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದೆ. ಶಾಲಾ ದಾಖಲಾತಿಯಿಂದ ಹಿಡಿದು ಸ್ಮಶಾನದವರೆಗೆ ಆಧಾರ್ ಕಾರ್ಡ್‌ನ್ನು ಕೇಳುತ್ತಿದ್ದಾರೆ. ಬಹುತೇಕರು ಇನ್ನೂ ಕೂಡಾ ಆಧಾರ ನೋಂದಾವಣೆ ಮಾಡಿರುವುದಿಲ್ಲ. ಆದರೆ ಜನರು ಆಧಾರ್ ನೋಂದಾವಣೆಗೆ ಈಗಿರುವ ಆಧಾರ್ ಕೇಂದ್ರಗಳಿಗೆ ಹೋದರೆ 6 ತಿಂಗಳ ನಂತರದ ದಿನಾಂಕ ನೀಡಲಾಗುತ್ತದೆ. ಜನಸಾಮಾನ್ಯರು ತಮ್ಮ ಉದ್ಯೋಗ, ಶಾಲೆ ಇತ್ಯಾದಿ ಕೆಲಸ ಕಾರ್ಯಗಳನ್ನು ತೊರೆದು ಆಧಾರ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ಈಗಾಗಲೇ ಹಿಂದಿನ ಜಿಲ್ಲಾಧಿಕಾರಿಗಳು ಕೆಲವು ತಿಂಗಳ ಹಿಂದೆ ಅಂಚೆ ಕಚೇರಿ ಸಹಿತ ಹಲವು ಸರಕಾರಿ ಇಲಾಖೆಗಳ ಕಚೇರಿಗಳಲ್ಲಿ ಆಧಾರ್ ಕೇಂದ್ರ ತೆರೆಯುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳ ಭರವಸೆ ಈಡೇರದೆ ಇರುವುದರಿಂದ ಜನರು ಆಧಾರ್ ಕಾರ್ಡುಗಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಚರಣ್‌ಶೆಟ್ಟಿ, ಹಂಝಾ ಕಿನ್ಯ ಮುಂತಾದವರು ಉಪಸ್ಥಿತರಿದ್ದರು.





