ರಾಜ್ಯ ಸರಕಾರದ್ದು ಅಭಿವೃದ್ಧಿ-ಸಾಧನಾ ಪರ್ವ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.10: ಪರಿವರ್ತನಾ ರ್ಯಾಲಿ, ಕುಮಾರಪರ್ವ ಮಾಡಲು ಕೆಲವರು ಹೊರಟಿದ್ದಾರೆ. ಆದರೆ, ನಮ್ಮದು ಅಭಿವೃದ್ಧಿ ಪರ್ವ, ಸಾಧನಾ ಪರ್ವ. ಪರಿವರ್ತನೆ ಬೇಕಿರುವುದು ಜನರಿಗಲ್ಲ. ಮತೀಯವಾದದಿಂದ ಜಾತ್ಯತೀತವಾದಕ್ಕೆ ಬಿಜೆಪಿಯವರು ಪರಿವರ್ತನೆಯಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ಹುಲಿ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಬೇಡಿ. ಅಧಿಕಾರ ಬರುತ್ತದೆ, ಹೋಗುತ್ತದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಅಧಿಕಾರಕ್ಕಾಗಿ ಧರ್ಮ-ಧರ್ಮದ ನಡುವೆ ಸಂಘರ್ಷ ಉಂಟುಮಾಡಿ, ಜನರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ಮಾಡಬೇಡಿ. ಅದು ಸಮಾಜಕ್ಕೆ, ನಾಡಿಗೆ ಹಾಗೂ ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಇತಿಹಾಸದ ಸಂಶೋಧನೆ ಮಾಡಿದ್ದೇವೆ ಎನ್ನುವವರೇ ಟಿಪ್ಪು ಸುಲ್ತಾನರನ್ನು ವಿರೋಧಿಸುತ್ತಿದ್ದಾರೆ. ಅಂತಹವರು ಮತ್ತೊಮ್ಮೆ ಟಿಪ್ಪು ಸುಲ್ತಾನರ ಚರಿತ್ರೆಯನ್ನು ಓದಿಕೊಳ್ಳುವುದು ಉತ್ತಮ. ರಾಜಕೀಯ ಕಾರಣಕ್ಕಾಗಿ ಬಿಜೆಪಿಯವರು ಈಗ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್‌ರನ್ನು ಮತಾಂಧ, ಹಿಂದೂ ವಿರೋಧಿ, ಕನ್ನಡ ವಿರೋಧಿ, ಅನೇಕ ಜನರನ್ನು ಕೊಂದ ಕ್ರೂರಿ ಎಂದು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಆರೋಪಿಸುತ್ತಿದ್ದಾರೆ. ರಾಷ್ಟ್ರಪತಿ ವಿಧಾನಸೌಧದ ವಜ್ರಮಹೋತ್ಸವ ಅಂಗವಾಗಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪುಸುಲ್ತಾನ್‌ರ ದೇಶಭಕ್ತಿಯನ್ನು ಉಲ್ಲೇಖಿಸಿದ್ದಾರೆ ಎಂದರು.
ಟಿಪ್ಪುಸುಲ್ತಾನ್ ಮತಾಂಧ ಆಗಿದ್ದರೆ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಅವರ ಬಗ್ಗೆ ಉಲ್ಲೇಖಿಸುತ್ತಿದ್ದರೇ? ರಾಜಕೀಯಕ್ಕಾಗಿ ಆ ಭಾಷಣವನ್ನು ಸರಕಾರ ಬರೆದುಕೊಟ್ಟಿದೆ ಎನ್ನುತ್ತಾರೆ. ಎಂತಹ ನೀಚರು ಇವರು. ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂದು ಟೀಕಿಸಿದರು.
ಪ್ರೊ.ಶೇಖ್ ಅಲಿ ಬರೆದಿರುವ ಪುಸ್ತಕಕ್ಕೆ ಅಂದು ಮುನ್ನುಡಿ ಬರೆದಿರುವ ಅಂದಿನ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್, ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ಇವರಿಗೆ ಒಂದು ನಾಲಗೆಯೋ ಎರಡು ನಾಲಗೆಯೋ? ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಟಿಪ್ಪು ಜಯಂತಿ ಆಚರಿಸಿ, ಟಿಪ್ಪು ವೇಷ ಧರಿಸಿ ಅಲ್ಲಾಹನ ಮೇಲೆ ಆಣೆ ನಾನು ಬಿಜೆಪಿ ಹೋಗುವುದಿಲ್ಲ ಎಂದಿದ್ದರು. ಉಪಮುಖ್ಯಮಂತ್ರಿಯಾಗಿದ್ದ ಅಶೋಕ್, ಸದಾನಂದಗೌಡ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ಈಗ ಓಟಿಗಾಗಿ ತೆಗಳುತ್ತಿದ್ದಾರೆ ಇದು ನ್ಯಾಯವೇ? ಎಂದು ಅವರು ಪ್ರಶ್ನಿಸಿದರು.
ಯಡಿಯೂರಪ್ಪ ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಆಚರಿಸಿಕೊಳ್ಳಲಿ. ಸರಕಾರಿ ಕಾರ್ಯಕ್ರಮವನ್ನಾಗಿ ಬೇಡ ಎಂದಿದ್ದಾರೆ. ಖಾಸಗಿಯಾಗಿ ಆಚರಿಸಿದರೆ ಟಿಪ್ಪು ವ್ಯಕ್ತಿತ್ವ ಬದಲಾವಣೆಯಾಗುತ್ತದೆಯೋ, ಎಂತಹ ನಾಚಿಕೆಗೆಟ್ಟ ಜನರಿದ್ದಾರೆ ನೋಡಿ. ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದರು, ಎಲ್ಲ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಟಿಪ್ಪು ಜಯಂತಿ ಶಾಂತಿಯುತವಾಗಿ ಆಚರಿಸಿದ್ದೇವೆ ಎಂದು ಹೇಳಿದರು.
ಟಿಪ್ಪುಸುಲ್ತಾನ್ ಒಬ್ಬ ದೇಶ ಭಕ್ತ, ಸ್ವಾತಂತ್ರ ಸಂಗ್ರಾಮಕ್ಕೆ ಮೊದಲು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿದ್ದಾರೆ. ದೇಶದ ಇತಿಹಾಸದಲ್ಲಿ ಬೇರೆ ಯಾವ ರಾಜನೂ ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿಲ್ಲ. ಅಶೋಕ ಚಕ್ರವರ್ತಿಯು ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಅನೇಕ ಯುದ್ಧಗಳನ್ನು ಮಾಡಿದ, ಅನೇಕರನ್ನು ಕೊಂದ. ಆಗಿನ ಕಾಲಕ್ಕೆ ಯುದ್ಧಗಳು ಸಾಮಾನ್ಯವಾಗಿತ್ತು ಎಂದರು.
ಟಿಪ್ಪುಸುಲ್ತಾನ್ ಕೋಮುವಾದಿ ಆಗಿರಲಿಲ್ಲ. ಆತನೊಬ್ಬ ಜಾತ್ಯತೀತ ಮನಸ್ಸಿನ ವ್ಯಕ್ತಿಯಾಗಿದ್ದ. ಆತನ ಆಸ್ಥಾನದಲ್ಲಿ ಎಲ್ಲ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನೆ ನೇಮಕ ಮಾಡಿದ್ದ. ಆದರೂ, ಟಿಪ್ಪುಸುಲ್ತಾನ್‌ರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ದ್ವೇಷದ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ ಶರಣರು, ಸಂತರು, ದಾಸರು, ಸೂಫಿಗಳ ನಾಡು. ಬಿಜೆಪಿಯವರೇ ರಾಜ್ಯದ ಜನರಿಗೆ ಯಾವುದು ಸರಿ ಯಾವುದು ತಪ್ಪು ಎಂಬುದು ಗೊತ್ತಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತಕ್ಕಾಗಿ, ಅಧಿಕಾರಕ್ಕಾಗಿ ಆಚರಣೆ ಮಾಡುತ್ತಿಲ್ಲ. ನಮ್ಮ ಸರಕಾರ 26 ಮಹನೀಯರು, ಮಾತೆಯರ ಜಯಂತಿ ಆಚರಣೆ ಮಾಡುತ್ತಿದೆ. ಅದರಲ್ಲಿ ಟಿಪ್ಪು ಜಯಂತಿಯೂ ಒಂದು ಎಂದು ತಿಳಿಸಿದರು.
ಪ್ರಗತಿಪರ ರಾಜನಾಗಿದ್ದ ಟಿಪ್ಪು ಎಂದಿಗೂ ವೈಭವಪೂರಿತ ಜೀವನ ನಡೆಸಲಿಲ್ಲ. ಅತ್ಯಂತ ಸರಳವಾಗಿ ಜೀವನ ನಡೆಸಿದ. ಆತನ ಅರಮನೆಗಳನ್ನು ನೋಡಿದರೆ ಸಾಕು ನಮಗೆ ತಿಳಿಯುತ್ತದೆ. ಐತಿಹಾಸಿಕ ಪುರುಷರನ್ನು ಮತಾಂಧತೆಯ ಕನ್ನಡಕದಲ್ಲಿ ನೋಡುವುದು ಬಿಡಿ. ಏನೆ ತಿಪ್ಪರಲಾಗ ಹಾಕಿದರೂ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.







