ಮಧ್ಯಪ್ರದೇಶ: ಊಟದ ತಟ್ಟೆಯಿಂದ ಶೌಚಾಲಯ ಸ್ವಚ್ಛಗೊಳಿಸಲು ಶಾಲಾಡಳಿತದ ಸೂಚನೆ; ಆರೋಪ

ಭೋಪಾಲ್, ನ.10: ಮಧ್ಯಾಹ್ನದ ಬಿಸಿಯೂಟ ಮಾಡಲು ಬಳಸಲಾಗುವ ಊಟದ ಬಟ್ಟಲು ಉಪಯೋಗಿಸಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಲು ಶಾಲೆಯ ಸಿಬ್ಬಂದಿಗಳು ಬಲವಂತಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಮಧ್ಯಪ್ರದೇಶದ ದಮೋಹ್ ಎಂಬಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಊಟದ ಬಟ್ಟಲು ಬಳಸಿ ಶೌಚಾಲಯದಲ್ಲಿದ್ದ ಮಲವನ್ನು ಸ್ವಚ್ಛಗೊಳಿಸಲು ಶಾಲೆಯಲ್ಲಿ ಹೇಳಿದ್ದಾರೆ ಎಂದು ತನ್ನ ಮಗಳು ದೂರಿದ್ದಾಳೆ ಎಂದು ವಿದ್ಯಾರ್ಥಿನಿಯ ತಂದೆ ಗುಡ್ಡು ಕುಶ್ವಾಹ ಎಂಬವರು ಆರೋಪಿಸಿದ್ದಾರೆ. ಈ ಕುರಿತು ಶಾಲೆಯ ಆಡಳಿತ ಮಂಡಳಿಯಲ್ಲಿ ದೂರು ನೀಡಿದ್ದೇವೆ ಎಂದವರು ತಿಳಿಸಿದ್ದಾರೆ.
ಆದರೆ ಘಟನೆಯನ್ನು ಶಾಲೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಸ್ವಚ್ಛತಾ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ನಡೆದಿದೆ. ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಸಹಿತ ಎಲ್ಲಾ ವಿದ್ಯಾರ್ಥಿಗಳೂ ಇದರಲ್ಲಿ ಪಾಲ್ಗೊಂಡಿದ್ದಾರೆ. ಶಾಲೆಯಲ್ಲಿ ಇರುವುದು ಒಂದೇ ಶೌಚಾಲಯ. ಮಲವನ್ನು ಸ್ವಚ್ಛಗೊಳಿಸುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಶ್ರೀನಿವಾಸ್ ಶರ್ಮ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಂಯೋಜಕರಿಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಅಧಿಕಾರಿಗಳ ತಂಡವೊಂದು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿ ವರದಿ ಒಪ್ಪಿಸಲಿದೆ ಎಂದವರು ತಿಳಿಸಿದ್ದಾರೆ.







