ಕೋಮುವಾದಿ ಮನಸ್ಥಿತಿಗಳಿಗೆ ಬೆದರುವುದಿಲ್ಲ: ಉಮಾಶ್ರೀ
ಟಿಪ್ಪು ಸುಲ್ತಾನ್ ಜಯಂತಿ

ಬೆಂಗಳೂರು, ನ.10: ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ರೀತಿಯಲ್ಲೇ ಕಾಂಗ್ರೆಸ್ ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿತ್ತು. ಅದಕ್ಕಾಗಿಯೇ, ನಮ್ಮ ಕಾಂಗ್ರೆಸ್ ಸರಕಾರವು ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಬ್ರಿಟಿಷರನ್ನು ವಿರೋಧಿಸಿದ ಎಲ್ಲರನ್ನೂ ನಾವು ಗೌರವಿಸುತ್ತೇವೆ. ಟಿಪ್ಪುವನ್ನು ವಿರೋಧಿಸುವ ಕೋಮುವಾದಿ ಮನಸ್ಥಿತಿಯ ಜನರಿಗೆ ಅಂಜುವುದಿಲ್ಲ, ಬೆದರುವುದಿಲ್ಲ, ಸೊಪ್ಪುಹಾಕುವುದಿಲ್ಲ. ಆ ಮೂಲಕ ಜಾತ್ಯತೀತ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದೇವೆ ಎಂದರು.
ಟಿಪ್ಪು ಸುಲ್ತಾನ್ ಕುರಿತು ಉಪನ್ಯಾಸ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ದೇಶದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡುವುದು ನಾಗರಿಕ ಸರಕಾರ ಮಾಡುವ ಅತ್ಯುತ್ತಮ ಕಾರ್ಯ. ದೇಶಭಕ್ತನೊಬ್ಬನ ಜಯಂತಿ ವಿವಾದಕ್ಕೀಡಾಗುತ್ತಿರುವುದು ದುರ್ದೈವ ಎಂದರು.
ಚರಿತ್ರೆ ವಾಸ್ತವವಾಗಿ ಹಾಗೇ ನಡೆದಿದೆಯೇ ಅಥವಾ ಅದರ ಬದಲಿಗೆ ಅದನ್ನು ಬರೆಯುವವರ ಮನಸ್ಥಿತಿಯನ್ನು ಆಧರಿಸಿರುತ್ತದೆ. ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ಅದು ವಿಕೃತಗೊಳ್ಳುತ್ತದೆ. ಇವತ್ತು ನಡೆಯುತ್ತಿರುವುದು ಅಂತಹ ಪ್ರಯತ್ನಗಳೇ, ಆ ಕಾಲದ ಸಂದರ್ಭಕ್ಕೆ ಅನುಗುಣವಾಗಿ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು.
ಟಿಪ್ಪು ಸುಲ್ತಾನ್‌ರನ್ನು ದೇಶದ್ರೋಹಿ ಎನ್ನುವವರಿಗೆ ನಾವು ಉತ್ತರ ನೀಡಬೇಕಿದೆ. ಸಂವಿಧಾನದ ಮೂಲ ಪ್ರತಿಯಲ್ಲಿ ದೇಶಕ್ಕಾಗಿ ಹೋರಾಡಿದಂತಹ, ತ್ಯಾಗ, ಬಲಿದಾನ ಮಾಡಿದ 15 ಮಹನೀಯರ ಚಿತ್ರಗಳನ್ನು ಹಾಕಲಾಗಿದೆ. ಈ ಪೈಕಿ ರಾಜ್ಯದ ಟಿಪ್ಪುಸುಲ್ತಾನ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಕೂಡ ಸೇರಿದ್ದಾರೆ. ಇದಕ್ಕೆ ಜನಸಂಘದ ಪ್ರಮುಖರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಸಹಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
‘ಟಿಪ್ಪುವಿನಲ್ಲಿದ್ದ ತಾಯಿನಾಡಿನ ಪ್ರೀತಿ, ವೀರಾವೇಶ, ಹೋರಾಟದ ಮನೋಭಾವನೆಯಿಂದ ನಾನು ಪ್ರೇರಿತನಾಗಿದ್ದೇನೆ’ ಎಂದು ಆರೆಸ್ಸೆಸ್ ನ ಮುಖಂಡ ಮಲ್ಖಾನಿ ಹೇಳಿದ್ದಾರೆ. ಪಂಡಿತ ಗೋವರ್ಧನರನ್ನು ತನ್ನ ಮೊದಲ ಗುರುವನ್ನಾಗಿ ಸ್ವೀಕರಿಸಿದ ಟಿಪ್ಪು ಮತಾಂಧನಾಗಲು ಹೇಗೆ ಸಾಧ್ಯ ಎಂದು ಹನುಮಂತಯ್ಯ ಪ್ರಶ್ನಿಸಿದರು.
1871ರಲ್ಲಿ 1.68 ಲಕ್ಷ ಇದ್ದ ಕೊಡವರು, 1911ರಲ್ಲಿ 1.74 ಲಕ್ಷಕ್ಕೆ ಏರಿಕೆಯಾದರು. ಕೊಡವರ ಮತಾಂತರವಾಗಿದ್ದರೆ ಅವರ ಜನಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ, ಆಗಲಿಲ್ಲ. ಮಕ್ಕಳನ್ನು ಒತ್ತೆ ಇಡುವ ಸಂದರ್ಭ ಬಂದರೂ ಬ್ರಿಟಿಷರಿಗೆ ಶರಣಾಗಲಿಲ್ಲ. ಆತನನ್ನು ದೇಶದ್ರೋಹಿ ಎನ್ನುವವರಿಗೆ ದಾಖಲೆಗಳನ್ನು ಕೊಟ್ಟು ಓದಿಸಬೇಕು ಎಂದು ವಿವರಿಸಿದರು.
ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್‌ಖಾನ್ ರಶಾದಿ ಮಾತನಾಡಿ, ಮುಸ್ಲಿಮರ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕ ಅಡ್ಡಿ ಆತಂಕಗಳ ನಡುವೆಯೂ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ತಪ್ಪು ದೃಷ್ಟಿಯಿಂದ ನೋಡಿದರೆ ಎಲ್ಲವೂ ತಪ್ಪಾಗಿ ಕಾಣಿಸುತ್ತದೆ. ಟಿಪ್ಪುಎಂದಿಗೂ ಭೇದ ಭಾವ ಮಾಡಿಲ್ಲ. ಮಂದಿರ, ಮಸೀದಿಗಳನ್ನು ಸಮಾನವಾಗಿ ಕಾಣುತ್ತಿದ್ದರು. ಸ್ವಾಮೀಜಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ಹೇಳಿದರು.
ರಾಜ್ಯದ ಮುಸ್ಲಿಮರು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಮುಂದುವರೆಯಲು ಬಯಸುತ್ತಿದ್ದಾರೆ. ಈ ಸರಕಾರ ಹೀಗೆಯೇ ಮುಂದುವರಿಯಲಿ, ನಾವೆಲ್ಲ ಹೀಗೆಯೇ ಕರ್ನಾಟಕದಲ್ಲಿ ಸುಖ, ಶಾಂತಿಯಿಂದ ಬಾಳುವಂತಾಗಲಿ. ಬಳ್ಳಾರಿ ರಸ್ತೆಗೆ ಟಿಪ್ಪುಸುಲ್ತಾನ್ ಹೆಸರಿಡುವಂತೆ ಬೆಂಗಳೂರಿನ ನಾಗರಿಕರ ಪರವಾಗಿ, ವಿಶೇಷವಾಗಿ ಮುಸ್ಲಿಮರ ಪರವಾಗಿ ಬೇಡಿಕೆ ಸಲ್ಲಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ರೋಷನ್‌ಬೇಗ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ವಿಧಾನಪರಿಷತ್ ಸದಸ್ಯರಾದ ಉಗ್ರಪ್ಪ, ರಿಝ್ವಾನ್ ಅರ್ಶದ್, ರಾಜ್ಯ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಸಲೀಮ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗೆ ಬೆಳ್ಳಿ ಕೀರಿಟ, ಖಡ್ಗ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಝಮೀರ್ ಅಹ್ಮದ್‌ಖಾನ್, ಬೆಳ್ಳಿಯ ಕಿರೀಟ, ಖಡ್ಗ ಹಾಗೂ ಟಿಪ್ಪು ಪೋಷಾಕು ತೊಡಿಸಿ ಸನ್ಮಾನಿಸಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವೈ.ಸಗೀರ್ ಅಹ್ಮದ್ ಹೂವಿನಲ್ಲಿ ಸಿದ್ಧಪಡಿಸಿದ ಟಿಪ್ಪು ಪೇಟ, ದಿರಿಸು, ಖಡ್ಗ ನೀಡಿ ಗೌರವಿಸಿದರು.







