ನ್ಯಾಯಮೂರ್ತಿಗಳ ಹುದ್ದೆ ಖಾಲಿ ಬಿಡುವುದು ಕಾನೂನು ಬಾಹಿರ: ಹೈಕೋರ್ಟ್‌ಗೆ ಹಿರಿಯ ವಕೀಲ ಆಚಾರ್ಯ ಹೇಳಿಕೆ
ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಕೋರಿ ಪಿಐಎಲ್
ಬೆಂಗಳೂರು, ನ.10: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ 37 ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಆದೇಶಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿರುವ ವಿಭಾಗೀಯ ಪೀಠ ವಿಚಾರಣೆ ಆರಂಭಿಸಿದೆ.
ನ್ಯಾಯಮೂರ್ತಿಗಳ ಹುದ್ದೆಗಳ ಶೀಘ್ರ ಭರ್ತಿ ಮಾಡಲು ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ, ವಕೀಲರಾದ ಎಸ್.ಬಸವರಾಜು ಮತ್ತು ಬಿ.ಎಂ.ಅರುಣ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅ.3ರಂದು ಈ ಅರ್ಜಿ ವಿಚಾರಣೆಯಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಿಂದೆ ಸರಿದಿದ್ದರು. ಹೀಗಾಗಿ, ನ್ಯಾಯಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲಾಗಿತ್ತು.
ಶುಕ್ರವಾರ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ವಾದ ಮಂಡಿಸಿ, ನ್ಯಾಯಮೂರ್ತಿ ಹುದ್ದೆಯು ಸಾಂವಿಧಾನಿಕವಾದದ್ದು. ಅದನ್ನು ಖಾಲಿ ಉಳಿಸುವುದು ಸಂವಿಧಾನ ಬಾಹಿರ. ನ್ಯಾಯಮೂರ್ತಿಗಳ ಕೊರತೆಯಿಂದ ನ್ಯಾಯಾಂಗ ಸುಲಲಿತವಾಗಿ ಕಾರ್ಯ ನಿರ್ವಹಿಸಲಾಗದು. ಇದರಿಂದ ಕೇವಲ ಕಕ್ಷಿದಾರಿಗೆ ಮಾತ್ರ ನಷ್ಟವಲ್ಲ. ಸರಕಾರದ ಆಡಳಿತ ಯಂತ್ರ ಕುಸಿಯುವ ಸಾಧ್ಯತೆಯಿದೆ. ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ನ್ಯಾಯಾಂಗದ ಜವಾಬ್ದಾರಿ ಎಂದರು.
ನ್ಯಾಯಮೂರ್ತಿ ರವಿ ಮಳೀಮಠ ಪ್ರತಿಕ್ರಿಯಿಸಿ, ನ್ಯಾಯಮೂರ್ತಿಗಳ ನೇಮಕಾತಿ ಕೊಲಿಜಿಯಂ ತೀರ್ಮಾನಕ್ಕೆ ಬಿಟ್ಟದ್ದರು. ಸುಪ್ರೀಂ ಕೋರ್ಟ್ ಆಡಳಿತದ ಭಾಗವಾಗಿರುತ್ತದೆ. ರಾಜ್ಯ ಹೈಕೋರ್ಟ್ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಗೆ ನಿರ್ದೇಶಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಅಲ್ಲದೆ, ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ಅಗತ್ಯವಿದೆ. ಪರಿಸ್ಥಿತಿ ನಮಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಮನವಿಯೂ ಸರಿಯಿದೆ. ಸುಪ್ರೀಂ ಕೋರ್ಟ್ ನ್ಯಾಯಾಂಗ ನೇಮಕಾತಿಯ ಕುರಿತು ಬುಧವಾರವಷ್ಟೇ ತೀರ್ಪು ನೀಡಿದೆ. ಅದರಂತೆ ನ್ಯಾಯಮೂರ್ತಿಗಳ ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸು ಮಾಡಲಾಗದು. ಹೀಗಿರುವಾಗ ಈ ನ್ಯಾಯಾಲಯವು ಯಾರಿಗೆ ನೋಟಿಸ್ ನೀಡಬೇಕು, ಪ್ರಕರಣದಲ್ಲಿ ನಾವು ಹೇಗೆ ಮಧ್ಯ ಪ್ರವೇಶಿಸಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ನೋಟಿಸ್ ನೀಡಿದ್ದರೂ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸಬಹುದು ಎಂದು ಗಮನ ಸೆಳೆದರು.
ಇದನ್ನು ಒಪ್ಪದ ನ್ಯಾಯಪೀಠ, ನೋಟಿಸ್ ಜಾರಿಗೊಳಿಸುವುದು ಅಥವಾ ಮೇಲ್ವಿಚಾರಣೆ ನಡೆಸುವುದು ಎರಡೂ ಒಂದೇ ಎಂದು ತಿಳಿಸಿತು. ನಂತರ ಬಿ.ವಿ.ಆಚಾರ್ಯ ಅವರು ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪನ್ನು ಅಧ್ಯಯನ ಮಾಡಿ ನಂತರ ತಮ್ಮ ವಾದ ಮುಂದುವರಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಒಪ್ಪಿದ ಪೀಠವು ನ.15ರವರೆಗೆ ವಿಚಾರಣೆ ಮುಂದೂಡಿತು.







