ಟಿಪ್ಪು ಸುಲ್ತಾನ್ ವಿಚಾರದಲ್ಲಿ ಪಕ್ಷಗಳು ಗೊಂದಲ ಸೃಷ್ಟಿಸುವುದು ಸರಿಯಲ್ಲ: ಚಲುವರಾಯಸ್ವಾಮಿ

ನಾಗಮಂಗಲ, ನ.10: ಭಾರತ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವಾಗಿದ್ದು, ಅವರವರ ಧರ್ಮ ಮತ್ತು ಸಂಸ್ಕೃತಿ ಪಾಲನೆಗೆ ಯಾವ ಅಡ್ಡಿಯೂ ಇಲ್ಲ. ಆದರೆ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ದೃಷ್ಟಿಯಿಂದ ಇಲ್ಲಸಲ್ಲದ ಗೊಂದಲ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಎನ್. ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪಟ್ಟಣದ ಮಿನಿ ವಿದಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಹಝರತ್ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಒಳ್ಳೆಯ ಗುಣಗಳು ಮತ್ತು ಸಾಧನೆಯನ್ನು ಪರಿಗಣಿಸಿ ಗೌರವಿಸಬೇಕು. ಯಾವುದೋ ಒಂದು ತಪ್ಪನ್ನು ಮುಂದುಮಾಡಿಕೊಂಡು ಗೊಂದಲ ಮೂಡಿಸುವುದು, ಇತರರಿಗೆ ನೋವುಂಟು ಮಾಡುವುದು, ಪ್ರಚೋದಿಸುವುದು ದೇಶದ ಅಭಿವೃದ್ಧಿಗೆ ಮಾರಕ ಎಂದರು.
ರಾಜ್ಯದ ಹೈದರಾಬಾದ್, ಮುಂಬೈ ಕರ್ನಾಟಕ ಭಾಗಕ್ಕಿಂತ ಮೈಸೂರು ಪ್ರಾಂತದಲ್ಲಿ ಸಮೃದ್ಧಿಯ ವಾತಾವರಣ ಮತ್ತು ಜನರಲ್ಲಿ ಉತ್ತಮ ನಾಗರಿಕತೆಯ ಬದುಕು ರೂಪಿತಗೊಳ್ಳಲು ಟಿಪ್ಪು ಸುಲ್ತಾನ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಉತ್ತಮ ರಾಜ್ಯಾಡಳಿತವೇ ಮುಖ್ಯ ಕಾರಣವೆಂಬುದನ್ನು ನಾವೆಲ್ಲ ಮರೆಯಬಾರದು ಎಂದು ಸ್ಮರಿಸಿದರು.
ಈ ವೇಳೆ ಅರೇನಹಳ್ಳಿ ಧರ್ಮೇಂದ್ರಕುಮಾರ್ ಟಿಪ್ಪು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ನವೀನ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷ ವಿಜಯ್‍ಕುಮಾರ್,ಉಪಾದ್ಯಕ್ಷ ಚಂದ್ರ, ಸದಸ್ಯರಾದ ನೂರ್ ಮೊಹಮ್ಮದ್, ಅನ್ಸರ್ ಪಾಷ, ತಹಶೀಲ್ದಾರ್ ಶಿವಣ್ಣ, ತಾಪಂ ಪ್ರಭಾರ ಇಒ ಶಾಂತ, ಡಿವೈಎಸ್ಪಿ ಧರ್ಮೇಂದ್ರ, ಮುಸ್ಲಿಂ ಮುಖಂಡರಾದ ಖಲೀಲ್, ಮುರ್ತುಜಾ, ಇತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.







