ಸುಂಟಿಕೊಪ್ಪ: ಬಂದ್‍ಗೆ ಕರೆಗೆ ಮಿಶ್ರ ಪ್ರತಿಕ್ರಿಯೆ

ಸುಂಟಿಕೊಪ್ಪ, ನ.10: ಪಟ್ಟಣದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಶುಕ್ರವಾರ ಹಿಂದೂ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟದಲ್ಲಿ ಕಾರ್ಯಚರಿಸುತ್ತಿರುವ ವಾಣಿಜ್ಯ ಮಳಿಗೆಗಳಿಗೆ ತೆರಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವ್ಯಾಪಾರ ಸ್ಥಗಿತಗೊಳಿಸುವಂತೆ ತಿಳಿಸಿದ ಹಿನ್ನೆಲೆ ಪಟ್ಟಣದ ಬಹುತೇಕ ಅಂಗಡಿ ಮುಗಟ್ಟುಗಳು ಬಂದ್ ಆಗಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆರಳೆಣಿಕೆ ಸರಕಾರಿ ಬಸ್ ಸೇರಿದಂತೆ ಖಾಸಗಿ ವಾಹನ ಸಂಚಾರ ಮಾತ್ರ ಎಂದಿನಂತಿದ್ದರೂ ಪ್ರಯಾಣಿಕರಿಲ್ಲದೆ ಬಾಡಿಗೆ ವಾಹನಗಳು ಬಣಗುಟ್ಟುತ್ತಿದ್ದವು. ಇನ್ನು ಸರಕಾರಿ ಕಚೇರಿ, ಬ್ಯಾಂಕ್‍ಗಳು ಎಂದಿನಂತೆ ಕಾರ್ಯಚರಿಸಿದ್ದವು ಗ್ರಾಹಕರು ಹಾಗೂ ಕಛೇರಿಗಳಿಗೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಸಂತ ಅಂತೋಣಿ ಶಾಲೆಯು ಎಂದಿನಂತೆ ಕಾರ್ಯಚರಿಸಿದ್ದರೂ ಖಾಸಗಿ ಬಸ್‍ಗಳಿಲ್ಲದೆ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗೈರುಹಾಜರಾದರು.
ಪಟ್ಟಣ ಸೇರಿದಂತೆ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸುವವರ ಮೇಲೆ ಹದಿನಕಣ್ಣು ಇಡಲಾಗಿತ್ತು.
ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿಗಳೊಂದಿಗೆ, ವಿವಿಧೆಡೆಗಳಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಗಳು, ಡಿ.ಆರ್.ಎ ಪೊಲೀಸ್ ತುಕಡಿಗಳು ಪಟ್ಟಣ ಸೇರಿದಂತೆ ಠಾಣಾ ಸಹರದ್ದಿನ ವಿವಿಧ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸೂಕ್ತ ಬಂದೋಬಸ್ತ್ ವಹಿಸಿದ್ದರು.







