ಡೇರಾ ಸೌಧದ 17 ಕೇಂದ್ರಗಳನ್ನೂ ನಿಯಂತ್ರಿಸುತ್ತಿದ್ದ ಗುರ್ಮೀತ್: ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

ಚಂಡೀಗಡ, ನ.10: ಡೇರಾ ಸಚ್ಚಾ ಸೌಧದ 17 ಪ್ರಾರ್ಥನಾ ಕೇಂದ್ರಗಳು ಡೇರಾದ ಮುಖ್ಯಸ್ಥ ಗುರ್ಮೀತ್ ಸಿಂಗ್‌ನ ಇಚ್ಛೆಯಂತೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ಡೇರಾ ಕೇಂದ್ರಗಳ ಕಾರ್ಯದ ಮೇಲ್ವಿಚಾರಣೆಗೆ ನಿಯುಕ್ತರಾಗಿರುವ ನ್ಯಾಯಾಲಯದ ಆಯುಕ್ತರು ಪಂಜಾಬ್ ಮತ್ತು ಹರ್ಯಾಣ ಉಚ್ಛನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹರ್ಯಾಣದಲ್ಲಿರುವ 15 ಹಾಗೂ ಪಂಜಾಬ್‌ನ 2 ಡೇರಾ ಕೇಂದ್ರಗಳು ಪ್ರತ್ಯೇಕ ಅಸ್ತಿತ್ವ ಹೊಂದಿಲ್ಲ. ಇವುಗಳಿಗೆ ಪ್ರತ್ಯೇಕವಾದ ಆಡಳಿತ ಮಂಡಳಿಯೂ ಇಲ್ಲ. ಈ ಕೇಂದ್ರಗಳಿಗೆ ಪ್ರತ್ಯೇಕ ಆದಾಯ ಮೂಲಗಳೂ ಇಲ್ಲ ಎಂದು ಹೈಕೋರ್ಟ್‌ನಿಂದ ನಿಯುಕ್ತರಾಗಿರುವ ನ್ಯಾಯಾಲಯದ ಆಯುಕ್ತ ಅನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಶಾ ಮಸ್ತಾನರ ಉತ್ತರಾಧಿಕಾರಿ ಸಂತ ಸತ್ನಾಮ್ ಬರೆದಿಟ್ಟ ಉಯಿಲು ಪತ್ರದಂತೆ ಗುರ್ಮಿತ್ 1990ರಲ್ಲಿ ಡೇರಾ ಪಂಥದ ಮುಖ್ಯಸ್ಥನಾಗಿ ನೇಮಕಗೊಂಡಿದ್ದು ಆ ಬಳಿಕ ಎಲ್ಲಾ ಡೇರಾ ಕೇಂದ್ರಗಳ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ ಎಂದು ಆಯುಕ್ತರು ತಿಳಿಸಿದ್ದಾರೆ.
1990ಕ್ಕೂ ಹಿಂದೆ ಆರಂಭವಾಗಿರುವ ಈ 17 ಡೇರಾ ಕೇಂದ್ರಗಳಲ್ಲಿ ತಮಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಡೇರಾ ಪಂಥದ ಸಾಧುಗಳ ಒಂದು ಗುಂಪು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಡೇರಾ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಇದರಂತೆ ನ್ಯಾಯಾಲಯದ ಆಯುಕ್ತರು ವರದಿ ನೀಡಿದ್ದಾರೆ. ಈ ಡೇರಾಗಳನ್ನು ಶಾ ಮಸ್ತಾನ ಸ್ಥಾಪಿಸಿರುವ ಕಾರಣ ಇವು ಡೇರಾ ಕೇಂದ್ರಕಚೇರಿಯ ಅಧೀನಕ್ಕೆ ಒಳಪಡದೆ ಪ್ರತ್ಯೇಕ ಅಸ್ತಿತ್ವ ಹೊಂದಿವೆ ಎಂದು ಸಾಧುಗಳು ಅರ್ಜಿಯಲ್ಲಿ ತಿಳಿಸಿದ್ದರು.
ಹರ್ಯಾಣದಲ್ಲಿರುವ ಡೇರಾ ಕೇಂದ್ರಗಳ ಪೈಕಿ 13 ಸಿರ್ಸ ಪಟ್ಟಣದಲ್ಲಿದ್ದರೆ, ಫತೇಬಾದ್ ಮತ್ತು ಹಿಸರ್‌ನಲ್ಲಿ ತಲಾ ಒಂದು ಕೇಂದ್ರಗಳಿವೆ. ಪಂಜಾಬ್‌ನ ಭಟಿಂಡ ಮತ್ತು ಮುಕ್ತ್‌ಸರ್‌ನಲ್ಲಿ ಡೇರಾ ಕೇಂದ್ರಗಳಿವೆ. ಇವುಗಳಲ್ಲಿ 10ನ್ನು 1960ಕ್ಕೂ ಮೊದಲು ಸ್ಥಾಪಿಸಲಾಗಿದ್ದರೆ ಉಳಿದವು ಆ ಬಳಿಕ ಆರಂಭಗೊಂಡಿವೆ. ಶಾ ಮಸ್ತಾನರು ಡೇರಾ ಕೇಂದ್ರಗಳ ಆಡಳಿತದ ಬಗ್ಗೆ ಯಾವುದೇ ನಿಯಮ ರೂಪಿಸದ ಕಾರಣ ಗುರ್ಮೀತ್ 1990ರ ಬಳಿಕ ಈ ಆಸ್ತಿಪಾಸ್ತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಂತಾಯಿತು. ಡೇರಾ ವ್ಯವಹಾರ ನಿಭಾಯಿಸುವ ಆಡಳಿತ ಮಂಡಳಿಯ ಸದಸ್ಯರನ್ನು ನೇಮಿಸುವ ಅಥವಾ ಅವರನ್ನು ಕಿತ್ತೊಗೆಯುವ ಸಂಪೂರ್ಣ ಹಕ್ಕನ್ನು ಗುರ್ಮೀತ್ ಪಡೆದುಕೊಂಡ. ಯಾವುದೇ ಡೇರಾ ಕೇಂದ್ರದ ಆದಾಯದ ಮಾಹಿತಿ ಇತರರಿಗೆ ತಿಳಿಯದಂತೆ ವ್ಯವಸ್ಥೆ ಮಾಡಿದ್ದ ಗುರ್ಮೀತ್, ಈ ಕೇಂದ್ರಗಳ ವಿದ್ಯುತ್ ಶುಲ್ಕವನ್ನು ಕೂಡಾ ಕೇಂದ್ರ ಕಚೇರಿಯ ಮೂಲಕವೇ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.







