ಹೆಣ್ಣು ಮಕ್ಕಳ ವಿದ್ಯೆಗೆ ಹೆಚ್ಚಿನ ಒತ್ತು ನೀಡಬೇಕು: ದತ್ತಾ
ಕಡೂರು, ನ.10: ಮುಸ್ಲಿಂ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು, ಮುಂದೆ ಬರಲು ವಿದ್ಯಾವಂತರಾಗಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಸ್ಲಿಂರು ಹೆಣ್ಣು ಮಕ್ಕಳ ವಿದ್ಯೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತಾ ತಿಳಿಸಿದ್ದಾರೆ.
ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪುಒಬ್ಬ ಸಾಂಸ್ಕೃತಿಕ ನಾಯಕ, ಅಧಿಕಾರಾವಧಿಯಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ದೇಶದಲ್ಲೇ ಒಬ್ಬ ಮಹಾನ್ ನಾಯಕನಾಗಿ ಹೊರಹೊಮ್ಮಿದ್ದನು. ಈಗ ಅವರ ಕುಟುಂಬಸ್ಥರು ಅತ್ಯಂತ ಕಡುಬಡತನದಲ್ಲಿರುವುದು ವಿಷಾದನೀಯ ಎಂದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ನಂತರ ಎಲ್ಲ ಸಮುದಾಯದ ದಾರ್ಶನಿಕರ ಸುಮಾರು 28 ಜಯಂತಿಗಳ ಆಚರಣೆಗೆ ಚಾಲನೆ ನೀಡಿದರು. ಆದರೆ,ಸರಕಾರ ಜಯಂತಿ ಆಚರಣೆಗೆ ಸಮರ್ಪಕವಾದ ಅನುದಾನ ನೀಡುತ್ತಿಲ್ಲ. ಟಿಪ್ಪುಜಯಂತಿ ಪ್ರಥಮವಾಗಿ ಆಚರಿಸಿದ ಕೀರ್ತಿ ಜೆ.ಡಿ.ಎಸ್. ಪಕ್ಷಕ್ಕೆ ಸಲ್ಲಬೇಕಿದೆ. ಸಿದ್ದರಾಮಯ್ಯ ಆಗ ಜೆ.ಡಿ.ಎಸ್.ರಾಜ್ಯಾಧ್ಯಕ್ಷರಾಗಿ ಆಚರಿಸಿದ್ದು, ಮುಖ್ಯಮಂತ್ರಿಯಾದ ನಂತರ ಅದೇ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಶರತ್ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಕೆ.ಎಸ್. ಆನಂದ್ ಮಾತನಾಡಿದರು.ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಶುಭಾ ಮರವಂತೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಭಾಗ್ಯಾ, ಎನ್.ಬಷೀರ್‌ಸಾಬ್, ಮೊಹಿದ್ದೀನ್, ಮಾಣಿಕ್‌ಪಾಷ, ಅಪ್ಸರ್ ಅಲಿ, ಗೌಸ್‌ಖಾನ್, ಅನ್ಸರ್ ಅಲಿ, ಸಮೀವುಲ್ಲಾ, ದಸ್ತಗೀರ್, ಸಯ್ಯದ್ ಇಸ್ಮಾಯಿಲ್, ಎನ್. ಇಮಾಂ, ತನ್ವೀರ್ ಅಹ್ಮದ್, ಮುಹಮ್ಮದ್ ಇಸ್ಮಾಯೀಲ್, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.ಉಪಸ್ಥಿತರಿದ್ದರು.







