ಟಿಪ್ಪು ಜಯಂತಿ ಸಂದರ್ಭ ಬಸ್ಸಿಗೆ ಕಲ್ಲು ತೂರಾಟ : ನಾಲ್ವರು ಆರೋಪಿಗಳ ಬಂಧನ

ಮಡಿಕೇರಿ,ನ.12 :ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭ ಕಾಲೂರಿನಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿಯ ವಿದ್ಯಾನಗರದ ನಿವಾಸಿಗಳಾದ ಟಿ.ಹೆಚ್.ಸುಧೀಂದ್ರ, ಬಿ.ಎ.ಉಮೇಶ, ಜಿ.ಕೆ. ನವೀನ ಹಾಗೂ ಬಿ.ಕಾಂ. ವಿದ್ಯಾರ್ಥಿ ಪಿ.ಎಂ.ಅಕ್ಷಯ ಬಂಧಿತ ಆರೋಪಿಗಳು.
ಜಿಲ್ಲಾ ಪೊಲೀಸರು ನಗರ ಹಾಗೂ ಹೊರ ವಲಯದಲ್ಲಿ ಕಟ್ಟೆಚ್ಚರ ವಹಿಸಿ ಬಂದೋಬಸ್ತ್ ನಲ್ಲಿ ತೊಡಗಿರುವ ವೇಳೆ ಕೆಲವು ದುಷ್ಕರ್ಮಿಗಳು ನಗರದಲ್ಲಿ ಕಲ್ಲು ತೂರಾಟ ನಡೆಸಿದರೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳವ ಸಾಧ್ಯತೆ ಇದೆ ಎಂಬ ಭಯದಿಂದ ನಿರ್ಜನ ಪ್ರದೇಶವಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ರಸ್ತೆಯನ್ನು ಆಯ್ಕೆ ಮಾಡಿದರು. ಕಾಲೂರು ಗ್ರಾಮಕ್ಕೆ ತೆರಳಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ನ್ನು ಹಿಂಬಾಲಿಸಿದ ನಾಲ್ವರು ಆರೋಪಿಗಳು ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಅಡ್ಡ ಹಾಕಿ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವತಿಯಿಂದ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮಾರದ ವೀಡಿಯೋವನ್ನು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಆರೋಪಿಗಳು ಮಡಿಕೇರಿಯಿಂದ ದ್ವಿಚಕ್ರವಾನದಲ್ಲಿ ಕೆ.ಎಸ್.ಆರ್.ಟಿ. ಬಸ್ಸನ್ನು ಹಿಂಬಾಲಿಸಿ ಕಾಲೂರು ಗ್ರಾಮದ ಕಟ್ಟೆಕಲ್ಲು ಎಂಬಲ್ಲಿ ಕಲ್ಲು ತೂರಾಟ ನಡೆಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಮಾರ್ಗದರ್ಶನದಲ್ಲಿ, ಮಡಿಕೇರಿ ಪೊಲೀಸ್ ಉಪಾಧೀಕ್ಷಕರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್.ಪ್ರದೀಪ್, ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸ್‍ಐ ಚೇತನ್, ಬೋಜಪ್ಪ ಹಾಗು ಸಿಬ್ಬಂದಿಗಳಾದ ತೀರ್ಥಕುಮಾರ್, ಕೆ.ಎ. ಇಬ್ರಾಹಿಂ, ಎ.ವಿ. ಕಿರಣ್, ಎ.ಯು. ಸತೀಶ್, ದಿನೇಶ್, ಶಿವರಾಜೇಗೌಡ, ಚಾಲಕರಾದ ಅರುಣ ಮತ್ತು ಸುನಿಲ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.







