ಸಿನಿಮಾವನ್ನು ಸಿನಿಮಾದಂತೆ ನೋಡಬೇಕು, ಇತಿಹಾಸದ ಜೊತೆ ಹೋಲಿಸಬಾರದು: ಕೇಂದ್ರ ಸಚಿವ ನಖ್ವಿ
ಪದ್ಮಾವತಿ ವಿವಾದ

ಮುಂಬೈ, ನ.12: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾದ ಬಗ್ಗೆ ತಲೆಯೆತ್ತಿರುವ ವಿವಾದದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ತಾನು ಸಿನಿಮಾವನ್ನು ಸಿನಿಮಾದಂತೆ ನೋಡುತ್ತೇನೆ, ಅದರಲ್ಲಿರುವ ತೋರಿಸಲಾಗಿರುವ ಇತಿಹಾಸ ಮತ್ತು ಭೌಗೋಳಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪದ್ಮಾವತಿ ಸಿನಿಮಾದ ಬಗ್ಗೆ ನಿಮಗೆ ವಿರೋಧವಿದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಒಂದು ಸಿನಿಮಾದಲ್ಲಿ ನಮಗೆ ಏನು ಇಷ್ಟವಾಗುತ್ತದೆ ಅದನ್ನು ಸ್ವೀಕರಿಸಬೇಕು ಮತ್ತು ಇಷ್ಟವಾಗದ್ದನ್ನು ಬಿಟ್ಟುಬಿಡಬೇಕು. ನಾನು ಪದ್ಮಾವತಿ ಸಿನಿಮಾವನ್ನು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ ಎಂದು ಉತ್ತರಿಸಿದರು.
ಡಿಸೆಂಬರ್ ಒಂದರಂದು ತೆರೆಗೆ ಬರಲು ಸಿದ್ಧವಾಗಿರುವ ಪದ್ಮಾವತಿ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಈ ಚಿತ್ರದ ಚಿತ್ರೀಕರಣ ಜೈಪುರದಲ್ಲಿ ನಡೆಯುತ್ತಿದ್ದ ವೇಳೆ ರಜಪೂತ ಸಮುದಾಯದ ಗುಂಪೊಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿತ್ತು.
ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ರಜಪೂತ ಸಂಘಟನೆಗಳು ಚಿತ್ರದ ಮೇಲೆ ನಿಷೇಧ ಹೇರುವಂತೆ ಕೋರಿವೆ.





