ದಾವಣಗೆರೆ : ರಷ್ಯಾ ಕ್ರಾಂತಿಯ ಶತಮಾನೋತ್ಸವ ಕಾರ್ಯಕ್ರಮ

ದಾವಣಗೆರೆ,ನ.12:ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಕ್ರಾಂತಿಗಳನ್ನು ಹುಟ್ಟು ಹಾಕಿದವರು ಜನಸಾಮಾನ್ಯರೇ ಹೊರತು ಅಧಿಕಾರಿ ವರ್ಗದವರಲ್ಲ ಎಂದು ಸಮಾನತೆಗಾಗಿ ಜನಾಂದೋಲನ ಕರ್ನಾಟಕದ ನೂರ್‍ಶ್ರೀಧರ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಕರ್ನಾಟಕ ಜನಶಕ್ತಿಯಿಂದ ಏರ್ಪಡಿಸಿದ್ದ ರಷ್ಯಾ ಕ್ರಾಂತಿಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ನಮ್ಮ ಗೌರಿ ಸಾಕ್ಷಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ರಷ್ಯಾ ಕ್ರಾಂತಿ ಹುಟ್ಟುಹಾಕಲು ಕಾರಣ ದುಡಿಯುವ ವರ್ಗದ ಮಹಿಳೆಯರು. ಶಾಂತಿಯುತವಾಗಿ ನಡೆಯಬೇಕಾಗಿದ್ದ ಹೋರಾಟ ಕ್ರಾಂತಿಯ ರೂಪ ಪಡೆಯಿತು. ಶೋಷಣೆ ತಾಳಲಾರದೆ ದುಡಿಯುವ ವರ್ಗದ ಮಹಿಳೆಯರು ಕ್ರಾಂತಿಯನ್ನೇ ಉಂಟು ಮಾಡಿದರು ಎಂದರು.
ರಷ್ಯಾ ಕ್ರಾಂತಿಯಿಂದಲೇ ಜಗತ್ತಿನಾದ್ಯಂತ ಕಲ್ಯಾಣ ಪ್ರಭುತ್ವದ ಪರಿಕಲ್ಪನೆ ಶುರುವಾಯಿತು. 1917ರ ರಷ್ಯಾ ಕ್ರಾಂತಿಗೂ ಮುನ್ನ ಆ ದೇಶದ ಜನತೆಗೆ ತಿನ್ನಲು ಬ್ರೇಡ್ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ಅಲ್ಲಿಯ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಮಹಿಳೆಯರ ಮೇಲೆ ಲೈಂಗೀಕ ದೌರ್ಜನ್ಯ. ಮಕ್ಕಳಿಂದ ದುಡಿತ ಹೀಗೆ ಸಾಕಷ್ಟು ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳಿಂದ ನೊಂದಿದ್ದ ಸುಮಾರು 90 ಸಾವಿರ ಮಹಿಳೆಯರು ಸೇನೆಯಲ್ಲಿದ್ದ ಸೈನಿಕರು, ನಾವೀಕರನ್ನು ಕರೆ ತಂದು ಜನ ಕ್ರಾಂತಿಯನ್ನ ಆರಂಭಿಸಿದ್ದರು. ಈ ಕ್ರಾಂತಿಯಿಂದ ಪಾಠ ಕಲಿತ ಜಗತ್ತಿನ ಇತರೆ ದೇಶಗಳು ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಮಾಧಾನ ಪಡಿಸದಿದ್ದರೆ ದಂಗೆ ಏಳುತ್ತಾರೆಂಬ ಕಾರಣಕ್ಕೆ ಕಲ್ಯಾಣ ಪ್ರಭುತ್ವದ ಪರಿಕಲ್ಪನೆಯನ್ನು ಆರಂಭಿಸಿದರು ಎಂದು ವಿಶ್ಲೇಷಿಸಿದರು.
ರಷ್ಯಾ ಕ್ರಾಂತಿಯ ನಂತರ ಹಿಟ್ಲರ್‍ಗೆ ಹೀನಾಯ ಸೋಲಾಯಿತು. ವಸಹತುಶಾಹಿಗೆ ಹಿನ್ನಡೆಯಾಯಿತು. ಆದ್ದರಿಂದಲೇ ಜಗತ್ತಿನಾದ್ಯಂತ ಏಕ ಚಕ್ರಾಧಿಪಾತ್ಯ ಸ್ಥಾಪಿಸಿದ್ದ ಬ್ರಿಟನ್ ಒಂದೊಂದೇ ರಾಷ್ಟ್ರಗಳು ತನ್ನ ಸಂಕೋಲೆಯಿಂದ ಕಳಚಿ ದೂರವಾಗಲಿವೆ ಎಂಬ ಆತಂಕದಿಂದ ತನ್ನ ವಸಹತುವಿನೊಳಗಿದ್ದ ಬಹುತೇಕ ರಾಷ್ಟ್ರಗಳಿಗೆ ಸ್ವಾತಂತ್ರ್ಯ ನೀಡಿತು ಎಂದರು.
ಈ ಮಹಾಕ್ರಾಂತಿಯ ಮುನ್ನ ರಷ್ಯಾದಲ್ಲಿ ಆರಂಭಿಕವಾಗಿ ಕೆಲ ಸಣ್ಣ ಕ್ರಾಂತಿಗಳು ನಡೆದಿದ್ದವು. ಇದರಿಂದ ಕಾರ್ಮಿಕರ ಜತೆಗೆ ರೈತಾಪಿ ವರ್ಗ ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸಿ ಜನ ಕ್ರಾಂತಿ ಆರಂಭಿಸಬೇಕು. ಕ್ರಾಂತಿಗೂ ಮುನ್ನ ದೇಶದಲ್ಲಿ ಕ್ರಾಂತಿಕಾರಕ ಪರಿಸ್ಥಿತಿ ಹಾಗೂ ಕ್ರಾಂತಿಕಾರಕ ಪಕ್ಷ ಇರಬೇಕು. ಬದಲಾವಣೆಗೆ ಜನರನ್ನು ತಯಾರುಗೊಳಿಸಬೇಕು. ನಿಸ್ವಾರ್ಥದಿಂದ ದೇಶದ ಒಳಿತಿಗಾಗಿ ಪ್ರಾಣ ತ್ಯಾಗ ಮಾಡುವ ನಿಷ್ಠಾವಂತ ಕಾರ್ಯಕರ್ತರ ಪಡೆ ಸೃಷ್ಠಿಸಬೇಕೆಂಬ ಪಾಠವನ್ನು ರಷ್ಯಾದ ಕಮ್ಯುನಿಷ್ಟ್ ನಾಯಕರು ಕಲಿತರು ಎಂದು ಹೇಳಿದರು.
1905ರಿಂದ 1917ರ ವರೆಗೆ ಭೂಗತ, ಬಹಿರಂಗ ಹಾಗೂ ರಾಜಕೀಯ ಹೋರಾಟಗಳು ನಡೆದವು. ಆದರೆ, ಅಷ್ಟೋತ್ತಿಗಾಗಲೇ ಪ್ರಪಂಚ ಯುದ್ಧ ಆರಂಭವಾಗಿತ್ತು. ಹೀಗಾಗಿ ಪಿತೃ ದೇಶದ ಉಳಿವಿಗಾಗಿ ಯುದ್ಧಗಳು ನಡೆದವು. ಆಗಲೂ ರೊಟ್ಟಿಗಾಗಿ ಹಾಹಾಕಾರ, ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರೆದಿತ್ತು. ಹೀಗಾಗಿ ಅಲ್ಲಿಯ ಜನತೆ ಯುದ್ಧ ನಿಲ್ಲಿಸಬೇಕು, ರೊಟ್ಟಿಗಾಗಿ ಹೋರಾಡಬೇಕೆಂಬ ಸಂಕಲ್ಪ ಮಾಡಿ, ಹೋರಾಟಕ್ಕೆ ಧುಮುಕಿದರು. ಈ ಹೋರಾಟದಿಂದ ವಿಚಲಿತರಾದ ಬಂಡವಾಳಶಾಹಿಗಳು, ಸೇನಾಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿ ಪರ್ಯಾಯ ಸಮ್ಮಿಶ್ರ ಸರ್ಕಾರ ಘೋಷಿಸಿದ್ದರು. ಆದರೂ ಅಧಿಕಾರ ಮಧ್ಯವರ್ತಿಗಳಾಗಿದ್ದ ಬಂಡವಾಳಶಾಹಿಗಳ ಪಾಲಾಯಿತೇ ಹೊರತು, ಜನರಿಗೆ ಅಧಿಕಾರ ಸಿಗಲೇ ಇಲ್ಲ. ಇದರಿಂದ ರೊಚ್ಚಿಗೆದ್ದ ಜನತೆ 1917ರ ಏಪ್ರೀಲ್‍ನಲ್ಲಿ ದಂಗೆ ಎದ್ದು ಮಹಾಕ್ರಾಂತಿ ನಡೆಸಿದರು ಎಂದು ಅವರು ಮಾಹಿತಿ ನೀಡಿದರು.
ಪ್ರಗತಿಪರ ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ರಷ್ಯಾ ಕ್ರಾಂತಿಯ ವಿಚಾರಧಾರೆಯ ಮೇಲೆಯೇ ಭಾರತದಲ್ಲಿ ಬದಲಾವಣೆ ತರುತ್ತೇವೆಂಬುದು ಅಸಾಧ್ಯ. ಏಕೆಂದರೆ, ಭಾರತ ಜಾತಿನಿಷ್ಠ ದೇಶವಾಗಿದ್ದು, ಧರ್ಮ ಗರ್ಭಿಕರಿಸಿಕೊಂಡೇ ಬಹುತೇಕ ಚಳವಳಿಗಳು ನಡೆಯುತ್ತವೆ. ಇಲ್ಲಿ ಮತೀಯ ಮತ್ತು ಕೋಮುವಾದಿ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಲು ಕಮ್ಯುನಿಷ್ಟ್ ಹಾಗೂ ಪ್ರಗತಿಪರ ಚಳವಳಿಯೇ ಕಾರಣವಾದಂತಾಗಿದೆ. ಏಕೆಂದರೆ ನಾವು (ಪ್ರಗತಿಪರರ/ಕಮ್ಯುನಿಷ್ಟರು) ಧರ್ಮದ ಆಚೆಗೆ ನಿಂತು ಮಾತನಾಡುತ್ತೇವೆ. ನಾವು ಧರ್ಮವನ್ನು ನಿರಾಕರಿಸುವುದರಿಂದ ನಮ್ಮನ್ನು ಗುಮಾನಿಯಿಂದ ನೋಡಲಾಗುತ್ತಿದೆ ಎಂದರು.
ಕರ್ನಾಟಕ ಜನಶಕ್ತಿಯ ಚಂದ್ರಶೇಖರ ತೋರಣಘಟ್ಟ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಅನೀಸ್ ಪಾಷಾ ಉಪಸ್ಥಿತರಿದ್ದರು. ಸತೀಶ್ ಅರವಿಂದ ಪ್ರಾಸ್ಥಾವಿಕ ಮಾತನಾಡಿದರು. ಎಸ್.ಎಂ. ಉಮೇಶ ನಿರೂಪಿಸಿದರು.







