ಟೀಮ್ ಇಂಡಿಯಾ ಆಟಗಾರರಿಗೆ ಡಿಎನ್‌ಎ ಪರೀಕ್ಷೆ

ಹೊಸದಿಲ್ಲಿ, ನ.12: ಟೀಮ್ ಇಂಡಿಯಾದ ಆಟಗಾರರು ಇನ್ನು ಮುಂದೆ ಡಿಎನ್‌ಎ ಪರೀಕ್ಷೆಗೆ ಒಳಗಾಗಲಿದ್ದಾರೆ. ಡಿಎನ್‌ಎ ಪರೀಕ್ಷೆಯಿಂದ ಆಟಗಾರರ ಅನುವಂಶೀಯ ಫಿಟ್‌ನೆಸ್ ಬಹಿರಂಗಗೊಳ್ಳಲಿದೆ.
ತಂಡದ ತರಬೇತುದಾರ ಶಂಕರ್ ಬಸು ಶಿಫಾರಸು ಮೇರೆಗೆ ಬಿಸಿಸಿಐ ಆಟಗಾರರನ್ನು ಡಿಎನ್‌ಎ ಪರೀಕ್ಷೆಗೊಳಪಡಿಸುವ ನಿರ್ಧಾರ ಕೈಗೊಂಡಿದೆ.
ಡಿಎನ್‌ಎ ಪರೀಕ್ಷೆಯು ಆಟಗಾರರ ವೇಗವನ್ನು ಇನ್ನಷ್ಟು ಉತ್ತಮಪಡಿಸಲು, ಕೊಬ್ಬು ಕರಗಿಸಲು , ಸಹಿಷ್ಣುತೆ , ಚೇತರಿಸಿಕೊಳ್ಳುವ ಸಮಯ ಮತ್ತು ಸ್ನಾಯುವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನೆರವಾಗಲಿದೆ.
ವ್ಯಕ್ತಿಯ ದೇಹದಲ್ಲಿರುವ 40ಕ್ಕೂ ಅಧಿಕ ಜೀನ್‌ಗಳು ವ್ಯಕ್ತಿಗೆ ಫಿಟ್‌ನೆಸ್, ಆರೋಗ್ಯ ಮತ್ತು ಪೌಷ್ಟಿಕತೆಯೊಂದಿಗೆ ಯಾವ ರೀತಿ ವರ್ತಿಸುತ್ತದೆ ಎಂದು ತಿಳಿಯಲು ಡಿಎನ್‌ಎ ಅಥವಾ ಅನುವಂಶಿಕ ಫಿಟ್ನೆಸ್ ಪರೀಕ್ಷೆ ನೆರವಾಗಲಿದೆ.
ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನನ್ನು 25 ಸಾವಿರದಿಂದ 30 ಸಾವಿರ ರೂ. ವೆಚ್ಚದಲ್ಲಿ ಡಿಎನ್‌ಎ ಪರೀಕ್ಷೆಗೊಳಪಡಿಸಲು ಬಿಸಿಸಿಐ ನಿರ್ಧರಿಸಿದೆ. ಹಿಂದೆ ಅಮೆರಿಕದಲ್ಲಿ ಮೊದಲ ಬಾರಿ ಎನ್‌ಬಿಎ(ಬಾಸ್ಕೆಟ್‌ಬಾಲ್) ಮತ್ತು ಎನ್‌ಎಫ್‌ಎಲ್ ಆಟಗಾರರ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.







