ಗೌರಿ ಲಂಕೇಶ್ ಹಂತಕರ ಪತ್ತೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ
.jpg)
ಬೆಳಗಾವಿ, ನ.13: ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹಂತಕರನ್ನು ಪತ್ತೆಹಚ್ಚಲು ವಿಶೇಷ ತನಿಖಾ (ಸಿಟ್) ತಂಡ ರಚಿಸಲಾಗಿದ್ದು, ಹಂತಕರ ಪತ್ತೆಗೆ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಗೌರಿ ಲಂಕೇಶ್ ಅವರ ಹತ್ಯೆ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಮೇಲಿನ ಪ್ರಹಾರ. ಹಿರಿಯ ಸಂಶೋಧಕ ಡಾ.ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ಸಮಾಜದಲ್ಲಿ ಭಯದ ವಾತಾವರಣ ಮೂಡಿಸಲು ಸಮಾಜ ಘಾತುಕ ಶಕ್ತಿಗಳು ನಡೆಸಿರುವ ಪ್ರಯತ್ನಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಅವರು ಎಂದೂ ಅನ್ಯಾಯದ ಜತೆ ಯಾವುದೇ ಕಾರಣಕ್ಕೂ ರಾಜಿಯಾದವರಲ್ಲ. ಸಾಮಾಜಿಕ ಸಮಸ್ಯೆಗಳ ವಿರುದ್ಧ ತಮ್ಮ ಪತ್ರಿಕೆ ಹಾಗೂ ಹೋರಾಟಗಳ ಮೂಲಕ ನಿರಂತರ ಧ್ವನಿ ಎತ್ತಿದವರು. ನಕ್ಸಲೀಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ವೈಯಕ್ತಿಕವಾಗಿಯೂ ಅವರು ನನ್ನೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಹತ್ಯೆಯಾಗುವ ವಾರದ ಮುನ್ನ ನನ್ನ ಮನೆಗೆ ಭೇಟಿ ನೀಡಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದರು ಎಂದು ಸ್ಮರಿಸಿಕೊಂಡರು.
ಊಹಾಪೋಹಾ ಬೇಡ: ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್ ತನಿಖೆ ನಡೆಯುತ್ತಿದೆ. ಆದರೆ, ಈವರೆಗೂ ಯಾವುದೇ ಸುಳಿವೂ ಸಿಕ್ಕಿಲ್ಲ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಕುತೂಹಲವಿದ್ದು, ಯಾರೂ ತಲೆಗೆ ಕಟ್ಟುವ ಕೆಲಸ ಸರಿಯಲ್ಲ. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಊಹಾಪೋಹದ ಸುದ್ದಿಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬೇಡಿ ಎಂದು ಕೋರಿದರು.
ಸಂಶೋಧಕ ಕಲ್ಬುರ್ಗಿ ಹತ್ಯೆ ನಡೆದು ಎರಡು ವರ್ಷ ಕಳೆದರೂ ಈವರೆಗೂ ಹಂತಕರ ಸುಳಿವಿಲ್ಲ. ಜನ ಸಾಮಾನ್ಯರಲ್ಲಿ ಭೀತಿ ಆವರಿಸಿದೆ. ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಕುಸಿಯುವ ಮೊದಲು ಹಂತಕರ ಬಂಧನಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಭಿವ್ಯಕ್ತಿ ಸ್ವತಂತ್ರಕ್ಕೆ ಗುಂಡು: ಜೆಡಿಎಸ್ ಉಪನಾಯಕ ದತ್ತ ಮಾತನಾಡಿ, ಅಸಹಿಷ್ಣುತೆ ಅಭಿವ್ಯಕ್ತಿ ಸ್ವತಂತ್ರವನ್ನು ಗುಂಡಿಕ್ಕಿ ಕೊಂದಿದೆ. ಸೈದ್ಧಾಂತಿಕ ವಿಚಾರಗಳನ್ನು ಅರಗಿಸಿಕೊಳ್ಳಲು ಆಗದ ವ್ಯಕ್ತಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು, ಹಂತಕರ ಮೂಲ ಪತ್ತೆ ಹಚ್ಚಲು ಸರಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ಮನವಿ ಮಾಡಿದರು.
ಹಂತಕರು ಬೆಳೆಯುವ ಆತಂಕ: ‘ಹಂತಕರು ಗೆಲ್ಲುತ್ತಾರೆ, ಚಿಂತಕರು ಸಾಯುತ್ತಾರೆಂಬ ಸ್ಥಿತಿ ಸರಿಯಲ್ಲ. ಹುಚ್ಚರ ಕೈಗೆ ಬಾಂಬು ಕೊಟ್ಟಂತೆ ಆಗಿದೆ. ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹಂತಕರ ಬಂಧನ ಸರಕಾರಕ್ಕೆ ಸವಾಲಾಗಿದ್ದು, ಅತ್ಯಂತ ಜವಾಬ್ದಾರಿಯುತವಾಗಿ ಹಂತಕರನ್ನು ತ್ವರಿತವಾಗಿ ಪತ್ತೆ ಮಾಡದೆ ಇದ್ದರೆ ಸತ್ಯ ಮಾತನಾಡುವವರಿಗೆ ಹಂತಕರ ಬೆಳೆಯುತ್ತಾರೆಂಬ ಆತಂಕ ಸೃಷ್ಟಿಯಾಗಲಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪ್ಮಟ್ಟಣ್ಣಯ್ಯ ಇದೇ ವೇಳೆ ಎಚ್ಚರಿಸಿದರು.
ವಿಧಾನ ಮಂಡಲ ಸಂತಾಪ ಸೂಚನೆ ನಿರ್ಣಯದಲ್ಲಿ ರೈತರ ಆತ್ಮಹತ್ಯೆಯನ್ನು ಸೇರಿಸಿ ಅವರ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಬೇಕು. ಜತೆಗೆ ದೇಶದ ಜನರ ಆಹಾರ ಭದ್ರತೆ ಸಂರಕ್ಷಣೆಗಾಗಿ ದುಡಿಯುವ ರೈತರಿಗೆ ಆತ್ಮಹತ್ಯೆಗೆ ಶರಣಾಗಬೇಡಿ ಎಂದು ಈ ಮೂಲಕ ಮನವಿ ಮಾಡಬೇಕು.
-ಕೆ.ಎಸ್.ಪ್ಮಟ್ಟಣ್ಣಯ್ಯ, ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ







