ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ಎಡಿಜಿಪಿ ಸೌಮೇಂದು ಮುಖರ್ಜಿ
ಗೃಹ ರಕ್ಷಕರಿಗೆ ಯುವ ಬ್ರಿಗೇಡ್ ಸಂಚಾಲಕನಿಂದ ಪಾಠ

ಬೆಂಗಳೂರು, ನ.13: ಹೊಸಪೇಟೆಯ ಗೃಹರಕ್ಷಕ ದಳದ ಕಚೇರಿಯಲ್ಲಿ ಯುವ ಬ್ರಿಗೇಡ್‌ನ ಸಂಚಾಲಕ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಉಪನ್ಯಾಸ ನೀಡಿದ್ದ ಸಂಬಂಧ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಎಡಿಜಿಪಿ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಹಿನ್ನೆಲೆಯುಳ್ಳ ಜನರಿಂದ ಉಪನ್ಯಾಸ ಕೊಡಿಸಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಉಪನ್ಯಾಸ ನೀಡುತ್ತಿರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಬೆಳಗ್ಗೆಯಿಂದಲೇ ಪರಿಶೀಲನೆ ನಡೆಸುತ್ತಿದ್ದೇವೆ. ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲಿಯೇ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದ್ದೇವೆ ಎಂದರು.
ಏನಿದು ಪಾಠ?: ಬಳ್ಳಾರಿಯ ಹೊಸಪೇಟೆಯ ಗಹರಕ್ಷಕ ದಳದ ಕಚೇರಿಯಲ್ಲಿ ರವಿವಾರ ನಡೆದ ಪರೇಡ್ ವೇಳೆ ಯುವ ಬ್ರಿಗೇಡ್‌ನ ತಾಲೂಕು ಸಂಚಾಲಕ ಚಂದ್ರಶೇಖರ್ ಉಪನ್ಯಾಸ ನೀಡಿದ್ದಾರೆ. ಗಹರಕ್ಷಕ ದಳದ ತಾಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿ ಅದರಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಚಂದ್ರಶೇಖರ್ ಸುಮಾರು ಒಂದು ಗಂಟೆ ಈ ಉಪನ್ಯಾಸ ನಡೆದಿದ್ದು, ನೀರಿನ ಬಳಕೆ ಮತ್ತು ರಾಷ್ಟ್ರೀಯತೆ ಕುರಿತು ಮಾತನಾಡಿದ್ದಾರೆ ಎಂದು ಗೃಹರಕ್ಷಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಯುವ ಬ್ರಿಗೇಡ್ ಸಂಚಾಲಕ ಚಂದ್ರಶೇಖರ್ ಉಪನ್ಯಾಸ ನೀಡಲು ಒಪ್ಪಿಗೆ ನೀಡಿದ್ದು ಎಷ್ಟು ಸರಿ?, ನಿರ್ದಿಷ್ಟ ವಿಚಾರಧಾರೆ ಹೊಂದಿರುವ ಸಂಘಟನೆಯ ಸಂಚಾಲಕರನ್ನು ಕರೆಸಿ ಗಹರಕ್ಷಕ ಸಿಬ್ಬಂದಿಗೆ ಉಪನ್ಯಾಸ ಕೊಡುವ ಜರೂರು ಏನಿತ್ತು? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಏನಿದು ಯುವ ಬ್ರಿಗೇಡ್?: 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ, ನರೇಶ್ ಶೆಣೈ ಮತ್ತಿತರರು ಸೇರಿ ಹುಟ್ಟು ಹಾಕಿದ ನಮೋ ಬ್ರಿಗೇಡ್ ಕೆಲ ದಿನಗಳ ನಂತರ ಯುವ ಬ್ರಿಗೇಡ್ ಎಂದು ಹೆಸರಾಯಿತು. ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್ ಶೆಣೈ ಕೆಲ ದಿನಗಳ ಕಾಲ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರು ಅವನನ್ನು ಬಂಧಿಸಿದ್ದರು. ಸದ್ಯ ಆತ ಜಾಮೀನಿನಲ್ಲಿ ಹೊರಗಿದ್ದಾನೆ.







