ಮೋದಿಗೆ ಜೀವನ ಪ್ರೀತಿ ಎಂಬುದಿಲ್ಲ: ಚಿಂತಕ ಜಿ.ಕೆ.ಗೋವಿಂದರಾವ್

ಬೆಂಗಳೂರು, ನ.13: ನಮ್ಮ ಪ್ರಧಾನ ಮಂತ್ರಿ ಮೋದಿಗೆ ಜೀವನ ಪ್ರೀತಿ ಎಂಬುದು ಇಲ್ಲ. ಅವರಿಗೆ ನಗೆಪಾಟಲಿನ ಮಾತುಗಳನ್ನು ಹೆಚ್ಚು ಆಡುವ ಖಯಾಲಿ ಇದೆ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದ್ದಾರೆ.
ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಘಟಕವು ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಧರ್ಮಾಂತರ: ಧಮ್ಮ ದೀಕ್ಷ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧಿಕಾರದಲ್ಲಿ ಮುಂದುವರಿಯಬೇಕು ಎಂಬವರು ಮಾತ್ರ ಹುಟ್ಟಿನಿಂದ ಸಾಯುವವರೆಗೂ ಒಂದೇ ಧರ್ಮದಲ್ಲಿ ಇರಬೇಕು ಎಂದು ವಾದಿಸುತ್ತಾರೆ. ಮತಾಂತರಗೊಳ್ಳುವುದು, ಹೊಸ ಮತಧರ್ಮ ಸ್ಥಾಪಿಸುವುದು ತಪ್ಪಲ್ಲ. ಕಾವಿಧಾರಿ ಮಠಾಧೀಶರ ಕಾಲಿಗೆ ಬೀಳುವುದನ್ನು ನಿಲ್ಲಿಸುವವರೆಗೂ ದೇಶ ಉದ್ಧಾರ ಆಗುವುದಿಲ್ಲ ಎಂದು ಅವರು ಹೇಳಿದರು.
ಮನುಷ್ಯನು ಧರ್ಮ, ವೃತ್ತಿಜೀವನ ಮತ್ತು ಆಡಳಿತ ವ್ಯವಸ್ಥೆ ಎಂಬ ಸಂಕೋಲೆಗಳಲ್ಲಿ ಸಾಯುವವರೆಗೂ ಬಂಧಿಯಾಗುತ್ತಿದ್ದಾನೆ. ಅವನು ನಿಸ್ವಾರ್ಥದಿಂದ ಇದ್ದು, ಧರ್ಮದ ಉತ್ಕೃಷ್ಟ ತತ್ವಗಳಾದ ಅಹಿಂಸೆ, ಸಮಾನತೆಗಳನ್ನು ರೂಢಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿ, ಜಾಗತೀಕರಣ ಮತ್ತು ಕೋಮವಾದದಿಂದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗುತ್ತಿದೆ. ಕೋಮುವಾದಿಗಳು ಮೀಸಲಾತಿ ರದ್ದುಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅವರ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡಲು ಹಿಂದುಳಿದವರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಖಾಸಗಿ ಕಂಪೆನಿಗಳು ಸರಕಾರದಿಂದ ಜಮೀನು, ನೀರು ಮತ್ತು ವಿದ್ಯುತ್‌ನಂತಹ ಸೌಕರ್ಯಗಳನ್ನು ಪಡೆಯುತ್ತವೆ. ಖಾಸಗಿ ರಂಗದಲ್ಲಿಯೂ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು ತೊಲಗಲು ಬೌದ್ಧ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಸಮಾಜವಾದಿ ಚಿಂತಕ ರುದ್ರಪ್ಪ ಹನಗವಾಡಿ, ಕೇಂದ್ರ ಸರಕಾರ ನ್ಯಾಯಾಲಯ, ಯೋಜನಾ ಆಯೋಗ, ಚುನಾವಣಾ ಆಯೋಗಗಳನ್ನು ದುರುಪಯೋಗ ಪಡಿಸಿಕೊಂಡ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಸಮಾನತೆ, ಭಾತೃತ್ವವನ್ನು ಕೆಡಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಜನಿಗೆ ಪ್ರೀತಿ ಮತ್ತು ಜ್ಞಾನ ಹೆಚ್ಚು ಸಿಕ್ಕಾಗ ಅಹಂಕಾರ ಮನೆಮಾಡುತ್ತದೆ. ಅದನ್ನು ನಿಯಂತ್ರಿಸಿ ದೀನ-ದುರ್ಬಲರ ಏಳಿಗೆಗಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ಕೊಳ್ಳೆಗಾಲ ಜೀತೋವನದ ಬೌದ್ಧ ಬಿಕ್ಕು ಮನೋರಖ್ಖಿತ ಭಂತೇ ಮಾತನಾಡುತ್ತಾ, ಅಜ್ಞಾನ ಮತ್ತು ದುರಾಸೆಯಿಂದ ದುಃಖ ಹೆಚ್ಚುತ್ತದೆ. ಬುದ್ಧ ಪ್ರತಿಪಾದಿಸಿದ ಆರ್ಯ ತತ್ವಗಳನ್ನು ರೂಢಿಸಿಕೊಂಡರೆ ದುಃಖವನ್ನೂ ಸಂತಸವಾಗಿ ಮಾರ್ಪಡಿಸಿಕೊಳ್ಳಬಹುದು ಎಂದ ಅವರು, ಧರ್ಮದ ಹೆಸರಿನಲ್ಲಿ ಇಂದು ಶೋಷಣೆ ನಡೆಯುತ್ತಿದೆ. ಅಂತಃಕರಣದ ಮೇಲೆ ರೂಪಿಸಲಾಗಿರುವ ಬೌದ್ಧ ಧರ್ಮವನ್ನು ಅನುಸರಿಸಿದರೆ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.







