ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖೆ ವಿಳಂಬಕ್ಕೆ ಕವಿತಾ ಲಂಕೇಶ್ ಬೇಸರ
.jpg)
ಬೆಂಗಳೂರು, ನ.13: ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ ಸಂಬಂಧ ಸಿಟ್ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ತಮ್ಮ ಮುಂದಿನ ಸಿನೆಮಾ ‘ಸಮ್ಮರ್ ಹಾಲಿಡೇಸ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ತನಿಖೆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದು ಭಾವುಕರಾದರು.
ಗೃಹ ಸಚಿವರ ಹೇಳಿಕೆ ಮೇಲೆ ನಂಬಿಕೆ ಇಡಬೇಕಾ ಬೇಡವಾ ಎನ್ನುವ ಅನುಮಾನ ಕಾಡುತ್ತಿದೆ. ಸಿಟ್ ತನಿಖಾಧಿಕಾರಿ ಬಿ.ಕೆ. ಸಿಂಗ್ ಅವರು ಇನ್ನು ಎರಡು ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.
‘ಸಮ್ಮರ್ ಹಾಲಿಡೇಸ್’ ಸಿನೆಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿರಲಿಲ್ಲ. ನಮ್ಮ ತಂದೆ ಪಿ.ಲಂಕೇಶ್ ಅವರು ಸರಕಾರಗಳ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ಸ್ಮರಿಸಿಕೊಂಡರು.







