ಕಾಸರಗೋಡು: ಕೊಲೆ ಪ್ರಕರಣ; ಇಬ್ಬರು ಬೆಳಗಾವಿ ನಿವಾಸಿಗಳ ಬಂಧನ

ಕಾಸರಗೋಡು, ನ. 13: ಮೂರು ತಿಂಗಳ ಹಿಂದೆ ಚೆರ್ಕಳದಲ್ಲಿ ಕರ್ನಾಟಕ ಬಾಗಲಕೋಟೆಯ ಯುವಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ನಿವಾಸಿಗಳಾದ ಇಬ್ಬರನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಜಿ ಸಿಮೋನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ಬೆಳಗಾವಿ ಸೊರೆಬಾನ್ ಗ್ರಾಮದ ವಿಠಲ (33) ಮತ್ತು ಸಹೋದರ ಅಕ್ಕುಂಡಪ್ಪ ( 30) ಎಂದು ಗುರುತಿಸಲಾಗಿದೆ. ಸಹವರ್ತಿಯಾಗಿದ್ದ ಬಾಗಲಕೋಟೆಯ ರಂಗಪ್ಪ ಗಾಜಿ ( 34) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.
ಆಗಸ್ಟ್ 9 ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ರಂಗಪ್ಪನ ಮೃತದೇಹ ಪತ್ತೆಯಾಗಿತ್ತು. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಲಾಗಿತ್ತು. ಸ್ಥಳದಿಂದ ಲಭಿಸಿದ ಗುರುತು ಚೀಟಿ ನೆರವಿನಿಂದ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿತ್ತು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಕೊಲೆ ಪ್ರಕರಣವನ್ನು ದಾಖಲಿಸಿದ ಪೊಲೀಸರು ಹಲವು ಸುಳಿವುಗಳನ್ನು ಕಲೆ ಹಾಕಿ ಕೊನೆಗೂ ಬೆಳಗಾವಿ ಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಸ್ಥಳದಿಂದ ಮದ್ಯದ ಬಾಟಲಿ, ಕೊಲೆಗೆ ಬಳಸಿದ ಕಲ್ಲುಗಳು ಪತ್ತೆಯಾಗಿದ್ದವು. ಮೊದಲು ಅಸಹಜ ಪ್ರಕರಣ ಎಂದು ದಾಖಲಿಸಲಾಗಿತ್ತು . ಆದರೆ ಮರಣೋತ್ತರ ಪರೀಕ್ಷೆಯಿಂದ ಕೊಲೆ ಎಂದು ಸಾಬೀತು ಆದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







