ರಂಗಭೂಮಿ ಜಾತಿ, ಧರ್ಮ ಮೀರಿದಾಗ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ: ಎಚ್.ಜಿ. ಸೋಮಶೇಖರ ರಾವ್
ಬೆಂಗಳೂರು, ನ.13: ಇಂದಿನ ರಂಗಭೂಮಿ ಜಾತಿ, ಧರ್ಮ ಮೀರಿದಾಗ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹಿರಿಕ ರಂಗಕರ್ಮಿ ಎಚ್.ಜಿ. ಸೋಮಶೇಖರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಉದಯಭಾನು ಕಲಾಸಂಘವು ಕನ್ನಡ ರಾಜ್ಯೋತ್ಸವ ಅಂಗವಾಗಿ ಕೆಂಪೇಗೌಡ ನಗರದ ಸಭಾಂಗಣದಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಬೇಲೂರು ಕೃಷ್ಣಮೂರ್ತಿ ಗೆ ‘ಉದಯಭಾನು ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಎಲ್ಲಿ ನೋಡಿದರೂ ಅಸ್ಪೃಶ್ಯತೆ, ಮೋಸ, ವಂಚನೆಗಳು ವಿಜೃಂಭಿಸುತ್ತಿವೆ. ಇವುಗಳನ್ನು ಹೋಗಲಾಡಿಸಿ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಶಕ್ತಿಯಿರುವುದು ರಂಗಭೂಮಿಗೆ. ರಂಗಭೂಮಿ ಶಿಸ್ತಿನ ಕ್ಷೇತ್ರವೂ ಹೌದು, ನಾಯಕತ್ವದ ಗುಣ ಹಾಗೂ ಸಂಯಮವನ್ನು ಕಲಿಸುವ ಕ್ಷೇತ್ರವೂ ಹೌದು ಎಂದ ಸೋಮಶೇಖರ್, ನಾನು ಆರು ದಶಕಗಳಿಗೂ ಹೆಚ್ಚು ಕಾಲದಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಇಳಿವಯಸ್ಸಿನಲ್ಲೂ ನನ್ನಲ್ಲಿ ನೆನಪಿನ ಶಕ್ತಿ, ಸಂಯಮ ಉಳಿದಿದೆ ಎಂದರೆ ಅದಕ್ಕೆ ಕಾರಣ ರಂಗಭೂಮಿ ಎಂದರು.
ಒಂದು ನಾಟಕವನ್ನು ಬರೆಯುವುದಕ್ಕೆ ಇಡೀ ಜೀವಮಾನವನ್ನೇ ಸವೆಸಬೇಕು. ಹೀಗಿರುವಾಗ ಬೇಲೂರು ಕೃಷ್ಣಮೂರ್ತಿ 100ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ ಎಂದರೆ ಅವರ ಪರಿಶ್ರಮಕ್ಕೆ ಹೆಮ್ಮೆ ಪಡಬೇಕು. ಇಂತಹವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೇಲೂರು ಕೃಷ್ಣಮೂರ್ತಿ, ನಾನು ಬರೆದ ಎಲ್ಲಾ ನಾಟಕಗಳೂ ಪ್ರಕಟವಾಗಿದ್ದು, ಬಹುತೇಕ ನಾಟಕಗಳು ನಗೆ ನಾಟಕಗಳಾಗಿವೆ. ಒಂದು ನಗೆ ನಾಟಕ ಪ್ರೇಕ್ಷಕರನ್ನು ಬರಿ ನಗಿಸುವುದಲ್ಲ. ಹೃದಯ ತುಂಬಿ ನಗು ಬರುವಂತಿರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ನಾಟಕಗಳ ಕಥೆಯನ್ನು ಸಿದ್ಧಪಡಿಸಿದ್ದೇನೆ ಎಂದ ಅವರು, ನಾನು ಬರೆದ ‘ತ್ಯಾಗಿ’ ನಾಟಕ ಹಲವರಿಗೆ ಬದುಕು ಕೊಟ್ಟಿದೆ. ನನ್ನ ಕಾರ್ಯವನ್ನು ಪರಿಗಣಿಸಿ ಉದಯಭಾನು ಕಲಾಸಂಘ ನೀಡಿದ ಪ್ರಶಸ್ತಿ ನನಗೆ ಅತ್ಯಂತ ಸಂತಸ ಉಂಟು ಮಾಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉದಯಭಾನು ಕಲಾಸಂಘದ ಕಾರ್ಯಾಧ್ಯಕ್ಷ ಡಾ. ಬಿ.ಎಸ್. ಸತ್ಯನಾರಾಯಣ, ಸಹ ಕಾರ್ಯದರ್ಶಿ ಕೆ.ಎನ್. ಸೋಮಶೇಖರ್, ಕನ್ನಡ ನಾಟಕೋತ್ಸವದ ಸಂಚಾಲಕ ಎಲ್. ವೆಂಕಟಪ್ಪ ಉಪಸ್ಥಿತರಿದ್ದರು.
ಇದೇ ವೇಳೆ ರಂಗಾಸ್ಥೆ ಟ್ರಸ್ಟ್‌ನಿಂದ ‘ನೀವು ಕರೆ ಮಾಡಿರುವ ಚಂದಾದಾರರು’ ಸಾಮಾಜಿಕ ನಾಟಕ ಹಾಗೂ ಸಂ.ಕ. ನಾಣಿ ಕಲಾನಿಕೇತನವು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಲಾಯಿತು.







