ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ಲೋಕಪಾಲ್ ಮಸೂದೆ ಜಾರಿಗೊಳಿಸಿಲ್ಲವೇಕೆ: ವೀರಪ್ಪ ಮೊಯ್ಲಿ

ಬೆಂಗಳೂರು, ನ.13: ಕೇಂದ್ರದ ಮೋದಿ ಸರಕಾರ ಹಿತಾಸಕ್ತಿ ಮರೆತು ಜೇಬು ತುಂಬಿಸಿಕೊಳ್ಳುವ ಕಾಯಕದಲ್ಲಿ ಮಗ್ನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ನಗರೂರು ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳು ಕಳೆದರೂ ಲೋಕಪಾಲ್ ಮಸೂದೆ ಜಾರಿಗೊಳಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರ ಗಬ್ಬರ್ ಸಿಂಗ್ ನಡವಳಿಕೆಯಿಂದ ದೇಶದ ಜನತೆ ಬೇಸತ್ತಿದ್ದಾರೆ. ಇದಕ್ಕೆ ಮಧ್ಯಪ್ರದೇಶದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಜಯಗಳಿಸಿರುವುದೇ ಸಾಕ್ಷಿ. ಮುಂಬರುವ ಗುಜರಾತ್ ಚುನಾವಣೆಯಲ್ಲೂ ಬಿಜೆಪಿ ಮುಖಭಂಗ ಅನುಭವಿಸಲಿದೆ ಎಂದು ಹೇಳಿದರು.
ಶೀಘ್ರದಲ್ಲೇ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷದ ಸಾರಥ್ಯ ವಹಿಸಲಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ರಾಜ್ಯದಲ್ಲಿ ಪಕ್ಷ ಸೇರ್ಪಡೆ ಪರ್ವ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸ್ವಯಂ ಇಚ್ಛೆಯಿಂದ ಸೇರ ಬಯಸುವವರಿಗೆ ಸ್ವಾಗತ ಸದಾ ಸ್ವಾಗತ ಇರುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರಕಾರದ ಜನಪರ ಆಡಳಿತ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮಾಲಾ, ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಜಿ.ಪಂ.ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ಲಾವಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಎಂ.ಪ್ರಕಾಶ್, ಎಸ್.ಬಿ.ಬಾಷಾ, ನಾಗೇನಹಳ್ಳಿ ಶ್ರೀನಿವಾಸ್ ಸೇರಿ ಪ್ರಮುಖರಿದ್ದರು.







