ಭಾರತಕ್ಕೆ ‘ನೇರ’ ಪ್ರಾಪ್ರಭುತ್ವ ಬೇಕು: ವರುಣ್ ಗಾಂಧಿ

ಮಣಿಪಾಲ, ನ.13: ವ್ಯವಸ್ಥೆಯಲ್ಲಿ ಜನರು ನೇರವಾಗಿ ಭಾಗವಹಿಸಲು ಸಾಧ್ಯವಾಗುವಂತೆ ‘ನೇರ ಪ್ರಜಾಪ್ರಭುತ್ವ’ ಭಾರತಕ್ಕೆ ಇಂದು ಬೇಕಾಗಿದೆ ಎಂದು ಉತ್ತರ ಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ವತಿಯಿಂದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್‌ಜ್ಯುಬಿಲಿ ಹಾಲ್‌ನಲ್ಲಿ ಸೋಮವಾರ ಸಂಜೆ ನಡೆದ ಟ್ಯಾಪ್ಮಿಯ ಲೀಡರ್‌ಶಿಪ್ ಉಪನ್ಯಾಸ ಸರಣಿಯಲ್ಲಿ ‘ರಾಜಕೀಯ ಸುಧಾರಣೆಯ ಅಗತ್ಯತೆ’ ವಿಷಯದ ಕುರಿತು ಮಾತನಾಡುತಿದ್ದರು.
ಯಾವುದೇ ಕಾನೂನು, ಯೋಜನೆಗಳು ಜಾರಿಗೊಳ್ಳುವ ಮುನ್ನ ಈ ಬಗ್ಗೆ ಜನರ ನಡುವೆ ಚರ್ಚೆ ನಡೆಯಬೇಕು. ಅವರ ಅಭಿಪ್ರಾಯ ಸಂಗ್ರಹಿಸಿ ಅದನ್ನು ಕ್ರೋಡೀಕರಿಸಿ ಇವುಗಳನ್ನು ಅನುಷ್ಠಾನಗೊಳಿಸಬೇಕು. ಅದೇ ರೀತಿ ಭ್ರಷ್ಟಾಚಾರ ನಿಯಂತ್ರಣಕ್ಕೆ ‘ನಾಗರಿಕ ಪರಿವೀಕ್ಷಣಾ ಸಮಿತಿ’ಯೊಂದನ್ನು ರಚಿಸಿ ಅದರ ಮೂಲಕ ಮೇಲ್ಮಟ್ಟದಿಂದ ಆರಂಭಿಸಿ ಕೆಳಗೆ ಗ್ರಾಮದಲ್ಲಿ ನಡೆಯುವ ರಸ್ತೆ ಕಾಮಗಾರಿಯವರೆಗೆ ಎಲ್ಲಾ ಕಾಮಗಾರಿ, ಯೋಜನೆಗಳ ಪರಿಶೀಲನೆಯಾಗ ಬೇಕು. ಆಗ ಇವುಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಇರುತ್ತದೆ ಎಂದವರು ಹೇಳಿದರು.
ಈಗ ಜನಪ್ರತಿನಿಧಿಯೊಬ್ಬ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಆತನೇ ಜನರ ಪರವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ಆತ ಆಯ್ಕೆಯಾಗುವ ಕ್ಷೇತ್ರದ ಅರ್ಧಕ್ಕಿಂತ ಕಡಿಮೆ ಮತಗಳನ್ನು ಪಡೆದಿರುತ್ತಾನೆ. ಫಾರೂಕ್ ಅಬ್ದುಲ್ಲ ಅವರು ಶೇ.4ರಷ್ಟು ಹಾಗೂ ದುಬೆ ಅವರು ಶೇ.11ರಷ್ಟು ಮಾತ್ರ ಮತಗಳನ್ನು ಪಡೆದಿದ್ದಾರೆ. ಸ್ವತಹ ತಾನು 2014ರಲ್ಲಿ ಸಂಸದನಾಗಿ ಆಯ್ಕೆಯಾಗುವಾಗಲೂ ಶೇ.50ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದೇನೆ ಎಂದವರು ಹೇಳಿದರು.
ಇಷ್ಟಾದರೂ ಜನರ ಪರವಾಗಿ ಈತ ನಿರ್ಣಯವೇ ಅಂತಿಮವಾಗಿರುತ್ತದೆ. ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯಾಗಲೀ, ಆತನ ಅಭಿಪ್ರಾಯಗಳಿಗೆ ಮಾನ್ಯತೆಯಾಗಲೀ ಇರುವುದಿಲ್ಲ. ಎಲ್ಲವೂ ದೂರದ ದಿಲ್ಲಿ ಅಥವಾ ಮುಂಬಯಿ, ಬೆಂಗಳೂರು, ಕೊಲ್ಕತ್ತಾಗಳ ಏರ್‌ಕಂಡೀಷನ್ಡ್ ರೂಮುಗಳಲ್ಲಿ ಕುಳಿತ ಅಧಿಕಾರಿಗಳಿಂದಲೇ ನಿರ್ಧಾರವಾಗುತ್ತಿವೆ. ಇದನ್ನು ಬದಲಿಸಲು ತಾನು ತನ್ನ ಕ್ಷೇತ್ರದಲ್ಲಿ ಪ್ರತಿಪಕ್ಷದವರು ಸೇರಿದಂತೆ ಎಲ್ಲಾ ಜನರೊಂದಿಗೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳುವ ಕ್ರಮವನ್ನು ಜಾರಿಗೊಳಿಸಿದ್ದೇನೆ ಎಂದು ವರುಣ್ ಗಾಂಧಿ ನುಡಿದರು.
ದೇಶದ ಯುವಜನತೆ ಹೆಚ್ಚೆಚ್ಚು ವ್ಯವಸ್ಥೆಯೊಳಗೆ ಪ್ರವೇಶಿಸಬೇಕಿದೆ. ಜೋರ್ಡಾನ್‌ನಲ್ಲಿ ಈಗ ‘ರಾಜಕೀಯ ಅಭಿವೃದ್ಧಿ’ಗೆ ಪ್ರತ್ಯೇಕ ಸಚಿವರಿದ್ದಾರೆ. ಅದೇ ರೀತಿ ನಮ್ಮಲ್ಲೂ ಜನಪ್ರತಿನಿಧಿಗಳೊಂದಿಗೆ ಜನರಿಗೆ ಹೆಚ್ಚು ಸಂವಾದ ನಡೆಸಲು ಅವಕಾಶ ಸಿಗಬೇಕು. ವಿದೇಶಗಳಲ್ಲಿರುವಂತೆ ಚುನಾವಣೆಯ ಸಂದರ್ಭದಲ್ಲಿ ಸ್ಪರ್ಧಿಗಳು ಟಿವಿಯ ಮೂಲಕ ಮತದಾರರೊಂದಿಗೆ ಚರ್ಚಿಸಲು, ಸಂವಾದ ನಡೆಸಲು ಅವಕಾಶ ನೀಡಬೇಕು. ಆಗ ಸ್ಪರ್ಧಿಗಳ ನಿಜ ಬಂಡವಾಳ ಹೊರಬೀಳುತ್ತದೆ ಎಂದವರು ನುಡಿದರು.
ಬಾಳೆಹಣ್ಣು ನೋಡದ ಬಾಲಕಿ: ನಾನು ನನ್ನ ಕ್ಷೇತ್ರದಲ್ಲಿ ಬಾಲಕಾರ್ಮಿಕರನ್ನು, ಬಾಲ ಗುಲಾಮರನ್ನು ಗುರುತಿಸಿ ಅವರನ್ನು ಶೋಷಣೆ ಮುಕ್ತರನ್ನಾಗಿ ಮಾಡುವ ಕಾರ್ಯ ನಡೆಸುತಿದ್ದು, ಇತ್ತೀಚೆಗೆ ಸುಮಾರು 20 ಮಕ್ಕಳನ್ನು ಈ ರೀತಿ ರಕ್ಷಿಸಿ ಕರೆದೊಯ್ಯುತ್ತಿರುವಾಗ 15 ವರ್ಷದ ಬಾಲಕಿಗೆ ತಿನ್ನಲೆಂದು ಬಾಳೆಹಣ್ಣನ್ನು ನೀಡಿದ್ದೆ. ಆಕೆ ಜೀವನದಲ್ಲಿ ಬಾಳೆಹಣ್ಣನ್ನು ಮೊದಲ ಬಾರಿ ನೋಡಿದ್ದು, ಅದನ್ನು ಹೇಗೆ ತಿನ್ನಬೇಕೆಂದೇ ತಿಳಿದಿರಲಿಲ್ಲ. ಅದೇ ರೀತಿ ಆಕೆಯ ತಮ್ಮ ಸೇಬುವನ್ನು ನೋಡಿ ‘ಈ ಬಟಾಟೆ ಚೆನ್ನಾಗಿದೆ’ ಎಂದ. ಅಂದರೆ ಅವರು ತಮ್ಮ ಬದುಕಿನಲ್ಲಿ ಇವುಗಳನ್ನೆಲ್ಲಾ ನೋಡೇ ಇರಲಿಲ್ಲ ಎಂಬುದು ನನಗೆ ತೀವ್ರವಾದ ನೋವನ್ನು ನೀಡಿತು ಎಂದರು.
ದೇಶದಲ್ಲಿ ಈಗ ತೀವ್ರ ಬಿಕ್ಕಿಟ್ಟಿಗೆ ಸಿಲುಕಿರುವ ಕೃಷಿ, ಜವುಳಿ ಉದ್ಯಮ ಹಾಗೂ ಆರೋಗ್ಯ ಕ್ಷೇತ್ರದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಕೃಷಿ ದೇಶದ ಜೀವನಾಡಿ ಎಂದು ಕರೆಸಿಕೊಂಡರೂ, ಸರಿಯಾದ ಕೃಷಿ ನೀತಿ ಇಲ್ಲ. ಇರುವುದನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದರು.
1950ರಲ್ಲಿ ದೇಶದಲ್ಲಿ 25 ಮಿಲಿಯ ಹೆಕ್ಟೇರ್ ಕೃಷಿ ಪ್ರದೇಶವಿದ್ದರೆ, ಈಗ ಅದು 114 ಮಿಲಿಯ ಹೆಕ್ಟೇರ್ ಕೃಷಿಭೂಮಿ ಇದೆ. ಆದರೆ ಇದರಲ್ಲಿರುವು ಸಣ್ಣ ಹಿಡುವಳಿದಾರರು. ಶೇ.42ರಷ್ಟು ಮಂದಿ ಗೇಣಿದಾರರಾಗಿದ್ದಾರೆ. ಇವರಿಗೆ ಸರಕಾದ ಯಾವುದೇ ಯೋಜನೆಗಳು, ಸೌಲಭ್ಯಗಳು ಸಿಗುವುದಿಲ್ಲ. ಏಕೆಂದರೆ ಇವರ ಹೆಸರಿನಲ್ಲಿ ಯಾವುದೇ ಕೃಷಿಭೂಮಿ ಇರುವುದಿಲ್ಲ ಎಂದು ವರುಣ್ ಗಾಂಧಿ ವಿವರಿಸಿದರು.
ಪಶ್ಚಿಮ ಬಂಗಾಳ ಭೂಮಸೂದೆ ಕಾನೂನನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾಗಿದೆ. ಇದರ ಲಾಭ ಪಡೆದ ಕಮ್ಯುನಿಸ್ಟ್ ಸರಕಾರ ಮುಂದೆ ಹಲವು ವರ್ಷ ಆ ರಾಜ್ಯವನ್ನಾಳಿತು. ಈಗ ದೇಶದಲ್ಲಿ ಗೇಣಿದಾರಿಕೆ ನಿಷೇಧಿತ ವಾದರೂ ಅವು ಎಲ್ಲೂ ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಪ್ರತಿವರ್ಷ 2000ಮಿಲಿಯ ಟನ್ ಮಾವು ಬೆಳೆಯುತ್ತದೆ. ಆದರೆ ಇವುಗಳಲ್ಲಿ ಶೇ.5ರಷ್ಟನ್ನು ಮಾತ್ರ ಸಂಗ್ರಹಿಸಿಡುವ ಸೌಲಭ್ಯ ರಾಜ್ಯದಲ್ಲಿದೆ ಎಂದು ಕೃಷಿಕನ ಸಂಕಷ್ಟಗಳನ್ನು ತೆರೆದಿಟ್ಟರು.
ದೇಶದಲ್ಲಿ ನಿರ್ಮಾಣ ಉದ್ಯಮ ಅತ್ಯಂತ ತ್ವರಿತ ಬೆಳವಣಿಗೆ ಕಾಣುತಿದ್ದರೂ, ಅದರಲ್ಲಿ ದುಡಿಯುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ವಿಧದ ಸೌಲಭ್ಯವಿಲ್ಲದೇ, ಜುಜುಬಿ ಸಂಬಳಕ್ಕೆ ಅವರು ದುಡಿಯುತಿದ್ದಾರೆ. ಈ ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಿವಿಯ ಕುಲಪತಿ ಡಾ.ವಿನೋದ್ ಭಟ್ ಉಪಸ್ಥಿತರಿದ್ದರು. ಟ್ಯಾಪ್ಮಿಯ ನಿರ್ದೇಶಕ ಡಾ.ಮಧು ವೀರರಾಘವನ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಲೋಗನಾಥನ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಶ್ರೀಮಂತನ ಪಟ್ಟಿ ಇದೆ, ಬಡವನದ್ದಿಲ್ಲ
ಪ್ರತಿವರ್ಷ ದೇಶದ ಮಿಲಿಯನೇರ್‌ಗಳ ಪಟ್ಟಿ ಮುಖಪುಟಗಳಲ್ಲಿ ಪ್ರಕಟ ಗೊಳ್ಳುತ್ತದೆ. ಆದರೆ ದೇಶದ ಕಡು ಬಡವರ ಪಟ್ಟಿಯನ್ನೆಲ್ಲಾದರೂ ನೋಡಿದ್ದೀರಾ ಎಂದು ವರುಣ್‌ಗಾಂಧಿ ಪ್ರಶ್ನಿಸಿದರು.
ರಾಜಸ್ತಾನದ ನಿವೃತ್ತ ಶಿಕ್ಷಕರೊಬ್ಬರು ದೇಶದ ಅತ್ಯಂತ ಬಡವನಿಗೆ ಒಂದು ಲಕ್ಷ ರೂ. ನೀಡುವ ಪ್ರಸ್ತಾಪವಿರಿಸಿ, ಆತನ ವಿವರ ನೀಡುವಂತೆ ಕೇಂದ್ರ ಸರಕಾರವನ್ನು ಕೋರಿಕೊಂಡರು. ಆದರೆ ಇಂಥ ಯಾವುದೇ ಪಟ್ಟಿ ನಮ್ಮಲ್ಲಿಲ್ಲ ಎಂದು ಉತ್ತರಬಂತು. ಹಾಗಿದ್ದರೆ 25 ಮಂದಿಯ ಪಟ್ಟಿ ನೀಡಿ ಅವರಲ್ಲಿ ಒಬ್ಬರಿಗೆ ನೀಡುತ್ತೇನೆ ಎಂದಾಗಲೂ ಸರಕಾರದ ಕಡೆಯಿಂದ ನಕಾರದ ಉತ್ತರ ಬಂದಿರುವ ವಿಷಯವನ್ನು ಅವರು ಸಭಿಕರೊಂದಿಗೆ ಹಂಚಿಕೊಂಡರು.
‘ಗಾಂಧಿ’ ಇಲ್ಲದಿದ್ದರೆ ಆಯ್ಕೆಯಾಗುತ್ತಿರಲಿಲ್ಲ
ನನ್ನ ಹೆಸರಿನಲ್ಲಿ ‘ಗಾಂಧಿ’ ಎಂಬ ಉಪನಾಮ ಇಲ್ಲದೇ ಇದ್ದಿದ್ದರೆ ನಾನು ಸಂಸದನಾಗಿ ಆಯ್ಕೆಯಾಗುತ್ತಿರಲ್ಲೇ ಇಲ್ಲ ಎಂದು ವರುಣ್ ಗಾಂಧಿ ನುಡಿದರು. ದೇಶದಲ್ಲಿ ಧರ್ಮ ಮತ್ತು ಜಾತಿಯಾಧಾರಿತ ರಾಜಕಾರಣ ಮಿತಿ ಮೀರಿದೆ. ‘ಪ್ರಸಿದ್ಧ’ ತಂದೆಯ ಹೆಸರು ಇಲ್ಲದಿದ್ದರೆ ಅಥವಾ ಗಾಡ್‌ಫಾದರ್ ಇಲ್ಲದೇ ಇದ್ದರೆ ಇಂದು ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.
ಹೀಗಾಗಿ ದೇಶದ ಅಸಮಾನತೆಯ ದೊಡ್ಡ ಲಾಭ ಪಡೆದವರಲ್ಲಿ ನಾನು ಒಬ್ಬನಾಗಿದ್ದೇನೆ ಎಂದ ವರುಣ್ ಗಾಂಧಿ ಅವರ ಇಡೀ ಭಾಷಣದಲ್ಲಿ ಅವರ ಬದಲಾದ ಚಿಂತನೆಯ ಎಳೆಗಳನ್ನು ಗುರುತಿಸಬಹುದಿತ್ತು. ಹೇಗೆ ಚಕ್ರವರ್ತಿ ಅಶೋಕ ತನ್ನ ಜೀವನದಲ್ಲಿ ಮನಪರಿವರ್ತನೆಯಾದನೊ ಅದೇ ರೀತಿ ಇಂದೂ ಸಾಕಷ್ಟು ಮಂದಿ ಬದಲಾಗಿರಬಹುದು ಎಂದು ಒಂದು ಕಾಲದಲ್ಲಿ ಹಿಂದುತ್ವದ ಬೆಂಕಿಚೆಂಡಿನಂತಿದ್ದ ವರುಣ್ ಗಾಂಧಿ ನುಡಿದರು.







