ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಯಡಿಯೂರಪ್ಪ

ಮಣಿಪಾಲ, ನ.13: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನರ ಮುಂದೆ ವಾಸ್ತವದ ಸ್ಪಷ್ಟ ಚಿತ್ರಣ ಇಡಬೇಕು. ಇದಕ್ಕಾಗಿ ಶ್ವೇತಪತ್ರವನ್ನು ಹೊರಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರಕಾರ ನೀಡಿ ದೊಡ್ಡ ಮೊತ್ತದ ಅನುದಾನವಲ್ಲದೇ, ಬೇರೆ ಎಲ್ಲೆಲ್ಲಿ ಸಾಲ ಮಾಡಿದ್ದೀರಿ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ನೀರಾವರಿ, ಶಿಕ್ಷಣ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಖರ್ಚಾದ ಮೊತ್ತವೆಷ್ಟು ಎಂಬುದರ ಸರಿಯಾದ ಚಿತ್ರಣ ಜನರಿಗೆ ಗೊತ್ತಾಗಬೇಕು ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಗೆ 46,000 ಕೋಟಿ ರೂ. ಇರಿಸಿದ್ದು, ಇದರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಖರ್ಚಾಗಿದ್ದು ಕೇವಲ 13,000 ಕೋಟಿ ರೂ.ಮಾತ್ರ ಎಂದವರು ನುಡಿದರು. ಇನ್ನೆರಡು-ಮೂರು ತಿಂಗಳಲ್ಲಿ ಸಿದ್ಧು ಸರಕಾರ ತೊಲಗಿ, ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಖಜಾನೆ ಖಾಲಿ ಮಾಡಿ ಹೋಗ ಬಹುದು. ಅದಕ್ಕಾಗಿ ವಾಸ್ತವ ಸಂಗತಿ ಹೊರಬರಬೇಕಿದೆ ಎಂದವರು ನುಡಿದರು.
ಕೇರಳದಲ್ಲಿ ಮತ್ತೊಬ್ಬ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಾಗಿದೆ. ಇದಕ್ಕೆ ಸಿಪಿಎಂ ನೇರ ಕಾರಣವಾಗಿದ್ದು, ಇದನ್ನು ಖಂಡಿಸುತ್ತೇನೆ ಎಂದರು. ಕೊಲೆಯ ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿಲ್ಲ. ಕೇರಳದಲ್ಲಿ ಬಿಜೆಪಿ ನೇತೃತ್ವ ದಲ್ಲಿ ಹಲವು ಹೋರಾಟ ನಡೆದರೂ ಕೊಲೆ ನಿಂತಿಲ್ಲ ಎಂದರು. ಆದರೆ ಕೇರಳದ ಗಡಿಯಿಂದ ಈ ಕ್ರೌರ್ಯ ಕೇರಳ ಗಡಿ ದಾಟಿ ಕರಾವಳಿಗೆ ಬರಲು ಬಿಡಲ್ಲ ಎಂದರು.
ಖಾಸಗಿ ವೈದ್ಯರ ವಿರುದ್ಧದ ಕರಾಳ ಮಸೂದೆಯನ್ನು ಕೈಬಿಡಬೇಕು. ರಾಜ್ಯದಲ್ಲಿ 42,000 ಖಾಸಗಿ ಆಸ್ಪತ್ರೆಗಳಿದ್ದು, ಈ ಮಸೂದೆ ವಿರುದ್ಧ ಹೋರಾಟ ನಡೆಸುತಿದ್ದಾರೆ. ಸರಕಾರ ವಿಕ್ರಂಜಿತ್ ಸೇನ್ ಸಮಿತಿ ವರದಿಯನ್ನು ಜಾರಿಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಪಕ್ಷ ಸೇರುವುದು ಖಚಿತ. ಆದರೆ ಅವರು ಪಕ್ಷ ಸೇರುವುದಕ್ಕೆ ವಿರೋಧಿಸುವ ವ್ಯಕ್ತಿಗಳ ವಿರುದ್ದ ಪಕ್ಷದ ವತಿಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ದರು. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಒರ್ವ ಸಜ್ಜನ, ಹಾಗೂ ಪ್ರಭಾವಿ ರಾಜಕಾರಣಿಯಾಗಿದ್ದು, ನಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಕೆಲವೊಂದು ತಪ್ಪು ನಿರ್ಧಾರಗಳಿಂದ ಬೇಸರಪಟ್ಟು ಪಕ್ಷದಿಂದ ಹೊರಹೋಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೂ ಕೂಡ ಅವರು ತಮ್ಮ ಬೆಂಬಲವನ್ನು ಸದಾ ಬಿಜೆಪಿ ಪಕ್ಷಕ್ಕೆ ನೀಡಿದ್ದರು. ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಈಗ ಅವರ ಬಿಜೆಪಿ ಸೇರ್ಪಡೆ ಸಾಧ್ಯವಿಲ್ಲ. ಆದರೆ ಡಿಸೆಂಬರ್ ಬಳಿಕ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಪ್ರಮೋದ್ ಬಿಜೆಪಿ ಸೇರ್ಪಡೆ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಈ ಬಗ್ಗೆ ಪಕ್ಷದೊಂದಿಗೆ ಪ್ರಮೋದ್ ಯಾವುದೇ ಮಾತುಕತೆ ನಡೆಸಿಲ್ಲ. ಅವೆಲ್ಲವೂ ಗಾಳಿಸುದ್ದಿ ಎಂದರು.
ಸಂಸದೆ ಶೋಬಾ ಕರಂದ್ಲಾಜೆ, ಮಟ್ಟಾರು ರತ್ನಾಕರ ಹೆಗ್ಡೆ, ರಘುಪತಿ ಭಟ್, ಲಾಲಾಜಿ ಮೆಂಡನ್, ಉದಯಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಶ್ಯಾಮಲಾ ಕುಂದರ್, ಶ್ರೀಶ ನಾಯಕ್ ಉಪಸ್ಥಿತರಿದ್ದರು.







