ಡಿ. 3ರಂದು ಹರಿದಾಸ ವಾಣಿಯ ಸಾಮೂಹಿಕ ಕಲಿಕೆ- ಗಾಯನ
ಉಡುಪಿ, ನ.13: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಮಂಗಳೂರು ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದೊಂದಿಗೆ ‘ಕೃಷ್ಣಾ ಎನಬಾರದೇ’ ಹರಿದಾಸ ವಾಣಿಯ ಸಾಮೂಹಿಕ ಕಲಿಕೆ- ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಡಿ.3ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4:30ರವರೆಗೆ ರಾಜಾಂಗಣದಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಸುಮಾರು 5000 ಭಜನಾಸಕ್ತರು ಭಾಗವಹಿಸಲಿದ್ದು, ಇವರು ಏಕಕಂಠ, ಏಕಸ್ವರದಲ್ಲಿ ನಾಮಸ್ಮರಣೆ ಮಾಡಲಿರುವರು. ಗಾಯಕ ಮತ್ತು ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ಹರಿದಾಸರ ಕೀರ್ತನೆಗಳನ್ನು ಹೇಳಿಕೊಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಗುರುರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಡಿ.3ರಂದು ಬೆಳಗ್ಗೆ 10ಗಂಟೆಗ ಪರ್ಯಾಯ ಪೇಜಾವರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಳಿಕ ದಾಸ ಸಾಹಿತ್ಯದ ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಲಾಗುವುದು. ಮಧ್ಯಾಹ್ನ 3ಗಂಟೆಯಿಂದ 4ರವರೆಗೆ ಭಾಗವಹಿಸಿದ ಎಲ್ಲರು ಕೀರ್ತನೆಗಳನ್ನು ಹಾಡಲಿದ್ದಾರೆ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಪ್ರವೀಣ್ ಡಿ., ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್, ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ ಉಪಸ್ಥಿತರಿದ್ದರು.







