ಬೆಳಗಾವಿ ಅಧಿವೇಶನದಲ್ಲಿ ಸಚಿವರು ಗೈರು: ಬಿಜೆಪಿ ಸಭಾತ್ಯಾಗ
ಬೆಳಗಾವಿ, ನ.13: ವಿಧಾನಪರಿಷತ್ತಿನಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಪೈಕಿ ಬಹುತೇಕರು ಗೈರು ಹಾಜರಾಗಿದ್ದನ್ನು ಗಮನಿಸಿ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಲಾಪ ಆರಂಭಗೊಳ್ಳುವ ಮುಂಚೆಯೇ ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.
ಸದನದ ಕಾರ್ಯಕಲಾಪದಂತೆ ಸೋಮವಾರ ಸದನದಲ್ಲಿ ಸಚಿವರಾದ ರೋಷನ್‍ಬೇಗ್, ತನ್ವೀರ್‍ಸೇಠ್, ರಮೇಶ್ ಜಾರಕಿಹೊಳಿ, ವಿನಯಕುಲಕರ್ಣಿ, ಎ.ಮಂಜು, ಈಶ್ವರಖಂಡ್ರೆ, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್ ಪ್ರಶ್ನೋತ್ತರಗಳಿಗೆ ಉತ್ತರಿಸಬೇಕಾದ ಕೆ.ಆರ್.ರಮೇಶ್ ಕುಮಾರ್, ಶರಣಪ್ರಕಾಶ್‍ಪಾಟೀಲ್ ಗೈರು ಹಾಜರಾಗಿದ್ದನ್ನು ಕಂಡು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸದನದ ಮೊದಲ ದಿನವೇ ಇವರ ಆಸಕ್ತಿ ಎಂತಹದ್ದು ಎಂದು ಗೊತ್ತಾಗುತ್ತದೆ. ಇದೊಂದು ಜವಾಬ್ದಾರಿಯುತ ಸರಕಾರವೇ. ಸದನದಲ್ಲಿ ಉತ್ತರಿಸಬೇಕಾದ ಸಚಿವರೇ ಗೈರು ಹಾಜರಾಗಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಇಲ್ಲ. ಅವರಿಗೆ ಸದನದಲ್ಲಿ ಪಾಲ್ಗೊಳ್ಳಬೇಕೆಂಬ ಪರಿಜ್ಞಾನ ಇಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವರಾದ ಯು.ಟಿ.ಖಾದರ್, ಉಮಾಶ್ರೀ, ಎಚ್.ಆಂಜನೇಯ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ. ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟ ಸಚಿವರು ಸದನಕ್ಕೆ ಬರಲಿದ್ದಾರೆ ಎಂದರು.
ಇದರಿಂದ ಮತ್ತಷ್ಟು ಕೆರಳಿದ ಈಶ್ವರಪ್ಪ, ನಾನು ನಿಮ್ಮ ಬಗ್ಗೆ ಮಾತನಾಡಿಲ್ಲ. ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಪಟ್ಟಿಯನ್ನು ನೀವೆ ನಮಗೆ ನೀಡಿದ್ದೀರಾ. ಈಗ ಅವರ ಗೈರು ಹಾಜರಿಯನ್ನು ನೀವು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಈ ಪಟ್ಟಿಯನ್ನು ನೀವೆ ಹರಿದು ಹಾಕಿ, ಇಲ್ಲ ನಾವು ಹರಿದು ಹಾಕುತ್ತೇವೆ. ಸದನಕ್ಕೆ ಸಕಾಲಕ್ಕೆ ಬರಲು ಆಗದೆ ಇರುವವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಆಗ್ರಹಿಸಿದರು.
ಯಾವ ಉದ್ದೇಶಕ್ಕಾಗಿ ಸದನವನ್ನು ಕರೆಯಲಾಗಿದೆ ಎಂಬ ವಿಚಾರವೇ ಸಚಿವರಿಗೆ ಗೊತ್ತಿಲ್ಲದಿದ್ದರೆ ಈ ಸರಕಾರವನ್ನು ಏನೆಂದು ಕರೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.







