ಬಡವರ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಜಾರಿ: ಸಿಎಂ ಸಿದ್ದರಾಮಯ್ಯ
ಮುಷ್ಕರ ಹಿಂಪಡೆಯಲು ವ್ಶೆದ್ಯರಿಗೆ ಮುಖ್ಯಮಂತ್ರಿ ಮನವಿ
ಬೆಳಗಾವಿ, ನ.13: ರಾಜ್ಯದಲ್ಲಿನ ಬಡವರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಸರಕಾರ ಹೊಸದಾಗಿ ಕಾನೂನು ಜಾರಿಗೆ ತರಲು ಮುಂದಾಗಿದೆ. ವೈದ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ. ವೈದ್ಯರನ್ನು ನಿಯಂತ್ರಿಸುವ ಉದ್ದೇಶವೂ ನಮಗಿಲ್ಲ. ಹೀಗಾಗಿ ಮುಷ್ಕರ ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಷ್ಕರನಿರತ ಖಾಸಗಿ ಆಸ್ಪತ್ರೆಗಳ ವೈದ್ಯರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ನಿಮಗೆ ತೊಂದರೆ ಕೊಡುವ ಉದ್ದೇಶ ಸರಕಾರಕ್ಕೆ ಇಲ್ಲ. ಹೀಗಾಗಿ ಮುಷ್ಕರ ವಾಪಸ್ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯರಿಗೆ ಕೋರಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರ ಮಂಡಿಸಲಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಕುರಿತು ಯಾವುದೇ ಭಯ ಬೇಡ. ವೈದ್ಯರಿಗೆ ತೊಂದರೆ ಅಥವಾ ಕಿರುಕುಳ ನೀಡಲು ಸರಕಾರ ವಿಧೇಯಕವನ್ನು ರೂಪಿಸಿಲ್ಲ. ಆದರೂ ವಿಧೇಯಕ ಮಂಡನೆಗೆ ಮುನ್ನ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಆವರೊಂದಿಗೆ ಹಾಗೂ ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.





