ಲಿಂಗಾಯತ ಪ್ರತ್ಯೇಕ ಧರ್ಮವೆಂದು ಘೋಷಿಸಿ: ದಯಾನಂದ ಸ್ವಾಮೀಜಿ ಆಗ್ರಹ
ನ.19 ರಂದು ಲಿಂಗಾಯಿತ ಧರ್ಮದ ಮಹಾಸಭೆ
ಮೈಸೂರು,ನ.13: ಬೌದ್ಧ, ಹಿಂದೂ, ಜೈನಾ ಇತರೆ ಅನ್ಯ ಧರ್ಮದಂತೆ ಲಿಂಗಾಯತವನ್ನು ಸಂವಿಧಾನ ಪರಿಚ್ಛೇದ 25ರಂತೆ ಅನುಮೋದಿಸಿ ಪ್ರತ್ಯೇಕ ಧರ್ಮವೆಂದು ಘೋಷಿಸಿಬೇಕೆಂದು ಲಿಂಗಾಯಿತ ಧರ್ಮ ಮಹಾಸಭಾ ರಾಷ್ಟ್ರೀಯ ಸಂಘಟಕ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಬಸವ ಧರ್ಮ, 12ನೆ ಶತಮಾನದ ಬಸವಾಧಿ ಪ್ರಮಥರ ಸಂಕಲ್ಪದ ಮಾನವೀಯ ಧರ್ಮವಾಗಿರುವ ಲಿಂಗಾಯತ ಧರ್ಮವು ಜಾತ್ಯಾತೀತವಾದದ್ದು, ಇದನ್ನು ಜಾತಿಯ ಹೆಸರಿನಲ್ಲಿ ಗುರುತಿಸುತ್ತಿರುವುದು ತರವಲ್ಲ, ಈ ಬಗ್ಗೆ ಜನಜಾಗೃತಿ ಅವಶ್ಯವಾಗಿದ್ದು, ಲಿಂಗಧಾರಿಗಳಾದವರೆಲ್ಲ ಲಿಂಗಾಯತರಾದರೆ, ಶಿವವನ್ನು ಆರಾಧಿಸುವವರು ಶೈವ ಪಂಥದವರಾಗಿದ್ದು ಅವರೆಲ್ಲಾ ವೀರಶೈವರು ಎಂದ ಅವರು, ನಮ್ಮದು ಯಾವುದೇ ರಾಜಕೀಯ ಪ್ರೇರಿತ ಹೋರಾಟವಲ್ಲ, ಹೋರಾಟಕ್ಕೆ ಯಾವ ರಾಜಕಾರಣಿಗಳ ಬೆಂಬಲವೂ ಬೇಕಿಲ್ಲ, ನಮ್ಮ ಬೇಡಿಕೆಗಳನ್ನು ಸಂವಿಧಾನಿಕವಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನವೇ ಸಿಖ್, ಜೈನ್, ಬೌದ್ಧ ಧರ್ಮಗಳನ್ನು ಹಿಂದೂ ಧಾರ್ಮಿಕ ಸಂಸ್ಥೆಗಳೆಂದು ಪರಿಗಣಿಸಿದೆ, ಇದರಂತೆ ಲಿಂಗಾಯತ ಧರ್ಮವನ್ನು ಪ್ರತ್ಯೇಕವೆಂದು ಪರಿಗಣಿಸಿದರೆ, ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯು ಉಂಟಾಗುವುದಿಲ್ಲ. ಲಿಂಗಾಯತ ಸ್ವತಂತ್ರ್ಯ ಧರ್ಮ ಎನ್ನುವದಕ್ಕೆ ಶರಣ ಪಂಥದಿಂದಲೂ ಸಾಕಷ್ಟು ಪುರಾವೆಗಳಿವೆ ಎಂದು ನುಡಿದರು.
ಸಮುದಾಯದ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಇಲ್ಲವೇ ಪಶ್ಚತಾಪ ಪಡುವಂತಾಗುವುದು. ಪ್ರತ್ಯೇಕ ಧರ್ಮವಾಗಿ ಘೋಷಣೆಯಾಗದಿದ್ದರೆ ದೇಶಕ್ಕೆ ಗಂಡಾಂತರವಿದೆ ಎಂದು ಎಚ್ಚರಿಸಿದ ಅವರು, ಪ್ರತ್ಯೇಕ ಧರ್ಮ ಘೋಷಣೆಯಾಗುವವರೆಗೆ ಅವಿರತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಬೃಹತ್ ಸಮಾವೇಶ: ಲಿಂಗಾಯಿತ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ರಾಷ್ಟ್ರೀಯ ಸಮಾವೇಶ ಹಾಗೂ ಲಿಂಗಾಯತ ಧರ್ಮ ಮಹಾಸಭೆಯ 22ನೆ ವಾರ್ಷಿಕೋತ್ಸವವನ್ನು ನ.19 ರಂದು ಬೆಳಗ್ಗೆ 10.30 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬಸವ ಧರ್ಮ ಮಹಾಜಗದ್ಗುರು ಪೀಠದ ಅಧ್ಯಕ್ಷ ಹಾಗೂ ಲಿಂಗಾಯಿತ ಧರ್ಮ ಮಹಾಸಭಾದ ಗೌರವಾಧ್ಯಕ್ಷರು, ಲಕ್ಷಾಂತರ ಜನರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ಅಂಬಳೆ ಶಿವಾನಂದಸ್ವಾಮಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಹೆಚ್.ಪಿ.ಗಂಗಾಧರ ಸ್ವಾಮಿ, ಸಂಚಾಲಕ ಜಯಣ್ಣ, ಶರಣತತ್ವ ಪ್ರಚಾರಕ ಹಲ್ಲರೆ ಶಿವಬುದ್ದಿ, ಬಸವ ಭಾರತ ಪತ್ರಿಕೆ ಸಂಪಾದಕ ವಿ.ಶಿವರುದ್ರಪ್ಪ ಇದ್ದರು.







