ಕರಗಡ ಯೋಜನೆಗೆ ಮುಖ್ಯಮಂತ್ರಿ ನಿಧಿಯಿಂದ 20 ಕೋ.ರೂ. ಬಿಡುಗಡೆ: ಗಾಯತ್ರಿ ಶಾಂತೇಗೌಡ
ಕಡೂರು, ನ.13: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕರಗಡ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಮಾರು 20 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಸದ್ಯ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ತಿಳಿಸಿದ್ದಾರೆ.
ಅವರು ಸೋಮವಾರ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿ, ಯೋಜನೆಗೆ ಅಡ್ಡಲಾಗಿದ್ದ ದೊಡ್ಡ ಬಂಡೆಯನ್ನು ಹೊಡೆದು ಕಾಮಗಾರಿ ಮುಂದುವರಿಸಲಾಗಿದೆ. ಕರಗಡ ಯೋಜನೆಗೆ ಸರಕಾರ ಎಷ್ಟೇ ಅನುದಾನ ನೀಡಿದರೂ ಈ ಯೋಜನೆ ಯಶಸ್ವಿಯಾಗಿ ರೈತರಿಗೆ ಅನುಕೂಲವಾಗಲು ಒಳ್ಳೆಯ ಮಳೆ ಬರಬೇಕಿದೆ. ಸಚಿವ ಎಚ್.ಸಿ. ಮಹದೇವಪ್ಪಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದ ಮೇರೆಗೆ ನಿಡಘಟ್ಟ ಗ್ರಾಮದಿಂದ ಗೇಟ್‌ವರೆಗೆ ರಸ್ತೆಯ ಅಭಿವೃದ್ಧಿಗಾಗಿ 3.30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ನಿಡಘಟ್ಟ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಜರಾಯಿ ಇಲಾಖೆಯಿಂದ ಗ್ರಾಮದ ಕಲ್ಲೇಶ್ವರ ದೇವಾಲಯಕ್ಕೆ 5 ಲಕ್ಷ ರೂ. ಅನುದಾನ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರಿಂದ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ತರಲಾಗಿದೆ ಎಂದರು.
ಈ ಸಂದರ್ದಲ್ಲಿ ನಿಡಘಟ್ಟ ಗ್ರಾಪಂ ಅಧ್ಯಕ್ಷ ಸಂತೋಷ್‌ಕುಮಾರ್, ಜಿಪಂ ಮಾಜಿ ಸದಸ್ಯೆ ಹೇಮಾವತಿ, ತಾಪಂ ಮಾಜಿ ಅಧ್ಯಕ್ಷ ಎನ್.ಪಿ.ಉಮೇಶ್, ರಾಜಣ್ಣ ಉಪಸ್ಥಿತರಿದ್ದರು.





