ಚುನಾವಣಾ ಪ್ರಣಾಳಿಕೆ ರಚನೆಗೆ ಕಾಂಗ್ರೆಸ್ ಭರದ ಸಿದ್ಧತೆ
ಬೆಂಗಳೂರು, ನ.14: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿ ಚುನಾವಣಾ ಪ್ರಣಾಳಿಕೆಯ ತಯಾರಿಯಲ್ಲಿ ನಿರತವಾಗಿದೆ.
ಕೆಪಿಸಿಸಿ ಚುನಾವಣಾ ಪ್ರಣಾಳಿಕಾ ರಚನಾ ಸಮಿತಿಯಲ್ಲಿ ಬಿ.ಎಲ್.ಶಂಕರ್ ಉಪಾಧ್ಯಕ್ಷರಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಕಾಗೋಡು ತಿಮ್ಮಪ್ಪ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ವಿ.ಆರ್.ಸುದರ್ಶನ್ ಸೇರಿದಂತೆ 35 ಮಂದಿ ಪ್ರಣಾಳಿಕಾ ರಚನಾ ಸಮಿತಿಯಲ್ಲಿದ್ದಾರೆ.
ಉಪಸಮಿತಿ ರಚನೆ: ಕೆಪಿಸಿಸಿ ಚುನಾವಣಾ ರಚನಾ ಸಮಿತಿ ಈಗಾಗಲೇ ಹಲವು ಸಭೆಗಳನ್ನು ನಡೆಸಿದೆ. ಪ್ರಣಾಳಿಕೆಯ ತಯಾರಿಕೆಗೆ ಅನುಕೂಲವಾಗುವಂತೆ ಆರೋಗ್ಯ, ಕೃಷಿ, ಹಣಕಾಸು, ಇಂಧನ, ಆಹಾರ ಇಲಾಖೆಗಳು ಒಳಗೊಂಡಂತೆ ವಿವಿಧ ಇಲಾಖೆಗಳನ್ನೊಳಗೊಂಡ ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉಪಸಮಿತಿಗಳು ಡಿಸೆಂಬರ್ ಒಳಗಾಗಿ ತಮಗೆ ವಹಿಸಿದ ಇಲಾಖೆಗೆ ಸಂಬಂಧಿಸಿದ ಅಗತ್ಯ ಅಂಶಗಳನ್ನು ಆಮೂಲಾಗ್ರವಾಗಿ ಚರ್ಚಿಸಿ, ಪ್ರಣಾಳಿಕೆಗೆ ಸೂಕ್ತವಾದ ಅಂಶಗಳನ್ನೊಳಗೊಂಡ ಪಟ್ಟಿಯೊಂದನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.
2013ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪ್ರಕಟಿಸಿದ ಚುನಾವಣೆಯ ಪ್ರಣಾಳಿಕೆಯಲ್ಲಿ ಶೇ.95ರಷ್ಟನ್ನು ಈಡೇರಿಸಲಾಗಿದೆ ಎಂದು ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ 2018ರ ಚುನಾವಣೆಯಲ್ಲಿಯೂ ಉತ್ತಮವಾದ ಪ್ರಣಾಳಿಕೆ ರಚಿಸಲು ಕೆಪಿಸಿಸಿ ಚುನಾವಣಾ ರಚನಾ ಸಮಿತಿ ನಿರ್ಧರಿಸಿದೆ.
ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಬಿಸಿಯೂಟ, ಉಚಿತ ಲ್ಯಾಪ್‌ಟಾಪ್ ವಿತರಣೆ, ಕೃಷಿ ಭಾಗ್ಯ, ಮನಸ್ವಿನಿ ಸೇರಿದಂತೆ ಹಲವಾರು ಭಾಗ್ಯಗಳನ್ನು ನೀಡಲಾಗಿದೆ. ಹಾಗೂ ರೈತರ ಸಾಲ ಮನ್ನಾ ಮಾಡಿರುವುದನ್ನು ಒಳಗೊಂಡಂತೆ ಇವೆಲ್ಲಾ ಕಾರ್ಯಕ್ರಮಗಳನ್ನು 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಗೆ ಒಳಗೊಳಿಸಿಕೊಳ್ಳುತ್ತಾರೆ. ತಮ್ಮ ಚುನಾವಣಾ ಪ್ರಣಾಳಿಕೆಯ ಕುರಿತು ಜನತೆಗೆ ನಂಬಿಕೆ, ವಿಶ್ವಾಸವನ್ನು ಹೇಗೆ ಮೂಡಿಸುತ್ತಾರೆ ಎಂಬುದು ಕಾಂಗ್ರೆಸ್‌ನ ಸೋಲು ಗೆಲುವನ್ನು ನಿರ್ಧರಿಸಲಿದೆ.
ಪ್ರಣಾಳಿಕಾ ರಚನಾ ಸಮಿತಿ: ವೀರಪ್ಪ ಮೊಯ್ಲಿ(ಅಧ್ಯಕ್ಷ), ಬಿ.ಎಲ್.ಶಂಕರ್(ಉಪಾಧ್ಯಕ್ಷ) ಹಾಗೂ ಸದಸ್ಯರಾದ ಎಸ್.ಆರ್.ಪಾಟೀಲ್, ಕಾಗೋಡು ತಿಮ್ಮಪ್ಪ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಮಾರ್ಗರೆಟ್ ಆಳ್ವ, ಸತೀಶ್‌ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಅಪ್ಪಾಜಿ ನಾಡಗೌಡ, ವಿ.ಆರ್.ಸುದರ್ಶನ್, ಕೃಷ್ಣಬೈರೇಗೌಡ, ಉಮಾಶ್ರೀ, ವಿನಯ್‌ಕುಮಾರ್ ಸೊರಕೆ, ಜೆ.ಅಲೆಕ್ಸಾಂಡರ್, ಕೆ.ಸಿ.ಕೊಂಡಯ್ಯ, ಬಿ.ಕೆ.ಚಂದ್ರಶೇಖರ್, ಎಲ್.ಹನುಮಂತಯ್ಯ, ಕೆ.ಎನ್.ರಾಜಣ್ಣ, ಐ.ಜಿ.ಸನದಿ, ಅಲ್ಲಮಪ್ರಭು ಪಾಟೀಲ್, ವೆಂಕಟರಾವ್ ಘೋರ್ಪಡೆ, ಪ್ರೊ.ರಾಧಾಕೃಷ್ಣ,, ಪುಷ್ಪ ಅಮರನಾಥ್, ಸೈಯದ್ ಝಮೀರ್‌ಪಾಷ, ಎಚ್.ಎಂ.ರೇವಣ್ಣ, ಪ್ರಿಯಾಂಕ ಖರ್ಗೆ, ಯು.ಟಿ.ಖಾದರ್, ಎಚ್.ಎಂ.ವಿಶ್ವನಾಥ್, ಸೈಯದ್ ನಸೀರ್ ಹುಸೈನ್ ಇದ್ದಾರೆ.







