ಬ್ಯಾಂಕ್‌ಗಳೇ ಸಶಸ್ತ್ರ ಸಿಬ್ಬಂದಿ ನೇಮಿಸಲಿ: ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ
ಜಿಲ್ಲಾ ಬ್ಯಾಂಕಿಂಗ್ ಭದ್ರತಾ ಸಮಿತಿ ಸಭೆ

ಮಂಗಳೂರು, ನ.14: ಬ್ಯಾಂಕ್‌ಗಳಿಂದ ನಗದು ಸಾಗಾಟ ಮಾಡುವಾಗ ಪೊಲೀಸ್ ಭದ್ರತೆ ಒದಗಿಸಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅದಕ್ಕಾಗಿ ಬ್ಯಾಂಕ್‌ಗಳೇ ಸಶಸ್ತ್ರ ಸಿಬ್ಬಂದಿಯನ್ನು ನೇಮಕ ಮಾಡಬೇಕು. ದೊಡ್ಡ ಮೊತ್ತದ ಹಣದ ಸಾಗಾಟ ಮಾಡಬೇಕಾದಾಗ ಮೂರು ದಿನಗಳ ಮುಂಚೆ ಮಾಹಿತಿ ನೀಡಿದರೆ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಬ್ಯಾಂಕಿಂಗ್ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಸಾಲ ವಸೂಲಿ ಮಾಡುವಾಗ ಬ್ಯಾಂಕ್ ಸಿಬ್ಬಂದಿಗೆ ಮಾತ್ರ ಪೊಲೀಸ್ ಭದ್ರತೆ ನೀಡಲಾಗುತ್ತದೆಯೇ ವಿನ: ಸಾಲ ವಸೂಲಿ ಮಾಡುವ ಕೆಲಸ ಮಾಡುವುದಿಲ್ಲ. ಸಾಲ ವಸೂಲಿ ಮಾಡುವ ಸಂದರ್ಭ ಬ್ಯಾಂಕ್ ಸಿಬ್ಬಂದಿಗೆ ಸಾಲಗಾರರಿಂದ ತೊಂದರೆಯಿದೆ ಎನ್ನುವುದು ಕಂಡುಬಂದರೆ ಪೊಲೀಸರಿಗೆ ಮುಂಚಿತವಾಗಿ ಲಿಖಿತವಾಗಿ ತಿಳಿಸಿದರೆ ಸೂಕ್ತ ಭದ್ರತೆ ನೀಡಲಾಗುವುದು. ಈ ಭದ್ರತೆ ಬ್ಯಾಂಕ್ ಸಿಬ್ಬಂದಿಯ ಭೌತಿಕ ಶರೀರಕ್ಕೆ ಮಾತ್ರ ಸೀಮಿತವಾಗಿರುತ್ತದೆಯೇ ವಿನ: ಇತರ ಉದ್ದೇಶಕ್ಕೆ ಬಳಕೆಯಾಗದು ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು.
ವಂಚನೆ ನಡೆದರೆ ದಾಖಲೆ ನೀಡಿ: ಬ್ಯಾಂಕ್‌ನಲ್ಲಿ ವಂಚನೆ ಪ್ರಕರಣ ನಡೆದ ತಕ್ಷಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು. ಅಲ್ಲದೆ, ಆರೋಪ ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಆರೋಪಿಗಳನ್ನು ಬಂಧಿಸಲಾಗದು ಎಂದ ಎಸ್ಪಿ, ಬ್ಯಾಂಕಿನೊಳಗೆ ನಡೆಯುವ ಅನೇಕ ವಂಚನೆ ಪ್ರಕರಣಗಳ ತನಿಖೆ ಸೂಕ್ತ ದಾಖಲೆ ಇಲ್ಲದಿರುವುದರಿಂದ ವಿಳಂಬವಾಗುತ್ತಿದೆ. ವಂಚನೆ ಪ್ರಕರಣದಲ್ಲಿ 50 ಮಂದಿ ಇದ್ದರೂ ಅವರಲ್ಲಿ ಇಬ್ಬರ ಆರೋಪ ಸಾಬೀತುಪಡಿಸುವ ದಾಖಲೆಗಳಿದ್ದರೂ ಸಾಕು ಎಂದು ತಿಳಿಸಿದರು.
ಸಿಸಿ ಕ್ಯಾಮರಾ: ಅನೇಕ ಬ್ಯಾಂಕ್ ಶಾಖೆಗಳ ಹೊರಗಡೆ ಸಿಸಿ ಕ್ಯಾಮರಾ ಇಲ್ಲದಿರುವುದು ಕಂಡುಬಂದಿದೆ. ಕೂಡಲೆ ಅವುಗಳನ್ನು ಅಳವಡಿಸಬೇಕು. ಬ್ಯಾಂಕ್ ಒಳಗಡೆ ಮೂವ್‌ಮೆಂಟ್ ಸೆನ್ಸ್ಸಾರ್‌ಗಳನ್ನೂ ಅಳವಡಿಸಬೇಕು. ಎಟಿಎಂ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ 15 ದಿನಗಳ ಸಿಸಿಟಿವಿ ವೀಡಿಯೊ ದಾಖಲೆಗಳನ್ನು ಸಂಗ್ರಹಿಸಿಟ್ಟಿರಬೇಕು. ಹೀಗೆ ಮಾಡುವುದರಿಂದ ಅಪರಾಧ ಕೃತ್ಯ ನಡೆದಾಗ ತನಿಖೆಗೆ ಸುಲಭವಾಗುತ್ತದೆ ಎಂದರು.
ಸಭೆಯಲ್ಲಿ ಡಿಸಿಪಿ ಹನುಮಂತರಾಯ, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ಉಪಸ್ಥಿತರಿದ್ದರು.







