ಪರಿಶಿಷ್ಟರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ಧರಣಿ

ತುಮಕೂರು, ನ.15: ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸು ಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಬಣದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಧರಣಿನಿರತರರು ಮಾತನಾಡಿ, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸುಮಾರು101 ಜಾತಿಗಳಿದ್ದು, ಸರಕಾರ ನೀಡುತ್ತಿರುವ ಶೇ.17.5ರ ಮೀಸಲಾತಿ ಅನ್ವಯ ಸರಕಾರಿ ಸವಲತ್ತುಗಳು ಸಮರ್ಪಕ ಪ್ರಮಾಣದಲ್ಲಿ ಪಟ್ಟಿಯಲ್ಲಿರುವ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಯಾಗುತ್ತಿಲ್ಲ. ಇದರ ಬಗ್ಗೆ ಕಳೆದ ಮೂರು ದೆಶಕಗಳಿಂದ ಹೋರಾಟ ನಡೆಸಿದ್ದರ ಫಲವಾಗಿ ಎಸ್.ಎಂ.ಕೃಷ್ಣ ಅವರು ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ನೇಮಕ ಮಾಡಿದ್ದು, ವರದಿ ಬಂದ ಐದು ವರ್ಷ ಕಳೆದರೂ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರವಾಗಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ, ಸಾಧಕ, ಬಾಧಕಗಳನ್ನು ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಪರಿಶಿಷ್ಟ ಜಾತಿಯಲ್ಲಿಯೇ ರಾಜಕೀಯ, ಆರ್ಥಿಕವಾಗಿ ಅತ್ಯಂತ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ನುಂಗಲಾರದ ತುತ್ತಾಗಿದ್ದು, ಸರಕಾರ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿ, ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು. ಇದಕ್ಕೆ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಬೆಂಬಲ ಸೂಚಿಸಬೇಕು. ಇಲ್ಲವಾದಲ್ಲಿ ಬೆಂಬಲ ಸೂಚಿಸದ ಶಾಸಕರ ವಿರುದ್ಧ ಮಾದಿಗರು ಸ್ಪರ್ಧಿಸಿ ಅವರನ್ನು ಸೋಲಿಸುವ ಕೆಲಸ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತುಮಕೂರು ನಗರದ ಹಳೆಯ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ಡಾ.ಬಾಬು ಜಗಜೀವನ್‍ರಾಂ ಭವನ ನಿರ್ಮಾಣಕ್ಕೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು.ಆದರೆ ನಗರಪಾಲಿಕೆ ಮತ್ತು ಎಪಿಎಂಸಿಗಳು ಇದಕ್ಕೆ ತಕರಾರು ತಗೆದಿದ್ದು,ಇದು ಖಂಡನೀಯ. ಜಿಲ್ಲಾಡಳಿತ ಈ ಹಿಂದಿನಂತೆಯೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ ಸಿಪಿ ಮತ್ತು ಟಿಎಸ್ ಪಿ ಅನುದಾನವನ್ನು ಹೆಚ್ಚಿಸಿ, ಅನುಷ್ಠಾನದ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವುದರ ಜತೆಗೆ, ಭಡ್ತಿ ಮೀಸಲಾತಿ ಕಾಯ್ದೆಯನ್ನು ಅನುಮೋಧಿಸಿ, ಜಾರಿಗೆ ತರಬೇಕು. ಅಲ್ಲದೆ, ಎಸ್ಸಿ, ಎಸ್ಟಿಗಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು, ಪಿಟಿಸಿಎಲ್ ಪ್ರಕರಣಗಳ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಧರಣಿಯಲ್ಲಿ ದಸಂಸ ಪ್ರೊ.ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು, ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ಜಿ.ಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಹೆಗ್ಗರೆ ಕೃಷ್ಣಮೂರ್ತಿ, ಶಾಂತರಾಜು, ಎನ್.ಕೆ.ನಿಧಿಕುಮಾರ್, ಬಂಡೆ ಕುಮಾರ್, ಮಹಾಲಿಂಗಪ್ಪ, ಸಿ.ಕೆ.ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್, ದೊಡ್ಡೇರಿ ಕಣಿಮಯ್ಯ, ಗಾಂಧಿರಾಜ್, ಭೂತೇಶ್, ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.







