ನೂತನ ಸಿಮ್ ಮರುದೃಢೀಕರಣ ವಿಧಾನಗಳ ಕುರಿತು ದೂರಸಂಪರ್ಕ ಕಂಪನಿಗಳ ಯೋಜನೆಗೆ ಯುಐಡಿಎಐ ಒಪ್ಪಿಗೆ

ಹೊಸದಿಲ್ಲಿ, ನ,15: ಡಿ.1ರಿಂದ ಹಾಲಿ ಚಂದಾದಾರರ ಆಧಾರ್ ಆಧರಿತ ಸಿಮ್ ಮರುದೃಢೀಕರಣಕ್ಕಾಗಿ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ)ನಂತಹ ನೂತನ ವಿಧಾನಗಳನ್ನು ಕಾರ್ಯಗತಗೊಳಿಸಲು ದೂರಸಂಪರ್ಕ ಸಂಸ್ಥೆಗಳು ಮುಂದಿಟ್ಟಿದ್ದ ಯೋಜನೆಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ತನ್ನ ಒಪ್ಪಿಗೆಯನ್ನು ನೀಡಿದೆ.
ದೂರಸಂಪರ್ಕ ಕಂಪನಿಗಳ ಯೋಜನೆಯನ್ನು ನಾವು ಒಪ್ಪಿಕೊಂಡಿದ್ದೇವೆ ಮತ್ತು ಡಿ.1ರಿಂದ ಅದನ್ನು ಜಾರಿಗೊಳಿಸುವಂತೆ ಸೂಚಿಸಿದ್ದೇವೆ ಎಂದು ಯುಐಡಿಎಐ ಸಿಇಒ ಅಜಯ ಭೂಷಣ್ ಪಾಂಡೆ ಅವರು ತಿಳಿಸಿದರು.
ಹಾಲಿ ಚಂದಾದಾರರು ತಮ್ಮ ಮನೆಗಳಲ್ಲಿಯೇ ಕುಳಿತುಕೊಂಡು ಸಿಮ್ ಮರುದೃಢೀಕರಿಸಲು ಸಾಧ್ಯವಾಗುವಂತೆ ಮೊಬೈಲ್ ಫೋನ್ ಸಂಖ್ಯೆಗಳಿಗೆ ಆಧಾರ್ ಜೋಡಣೆಯನ್ನು ಪೂರ್ಣಗೊಳಿಸಲು ಮೂರು ಹೊಸ ವಿಧಾನಗಳನ್ನು ಸರಕಾರವು ಕಳೆದ ತಿಂಗಳು ಪ್ರಕಟಿಸಿತ್ತು ಮತ್ತು ಈ ಬಗ್ಗೆ ತಮ್ಮ ಯೋಜನೆಯನ್ನು ಯುಐಡಿಎಐಗೆ ಸಲ್ಲಿಸುವಂತೆ ದೂರಸಂಪರ್ಕ ಕಂಪನಿಗಳಿಗೆ ಸೂಚಿಸಲಾಗಿತ್ತು.
ಈಗ ಅನುಮತಿ ನೀಡಲಾಗಿರುವ ಹೊಸ ವಿಧಾನಗಳಂತೆ ಒಟಿಪಿ, ಆ್ಯಪ್ ಅಥವಾ ಐವಿಆರ್‌ಎಸ್ ಸೌಲಭ್ಯದ ಮೂಲಕ ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ಜೋಡಿಸಬಹುದಾಗಿದೆ. ಈ ಕ್ರಮವು ಇಡೀ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಜನರಿಗೆ ಅನುಕೂಲವಾಗಿಸುವ ಉದ್ದೇಶವನ್ನು ಹೊಂದಿದೆ.
ಇದರೊಂದಿಗೆ ಮೊಬೈಲ್ ಕಂಪನಿಗಳ ಮಳಿಗೆಗಳಲ್ಲಿಯೂ ಆಧಾರ ಜೋಡಣೆ ಪ್ರಕ್ರಿಯೆಯು ಮುಂದುವರಿಯಲಿದೆ. ಅಂಗವಿಕಲರು, ತೀವ್ರ ಅನಾರೋಗ್ಯ ಪೀಡಿತರು ಮತ್ತು ಹಿರಿಯ ನಾಗರಿಕರಿಗೆ ಅವರ ಮನೆಬಾಗಿಲಿನಲ್ಲೇ ಆಧಾರ ಜೋಡಣೆ ಸೌಲಭ್ಯ ಕಲ್ಪಿಸುವಂತೆ ಸರಕಾರವು ಕಂಪನಿಗಳಿಗೆ ಸೂಚಿಸಿತ್ತು.







