ಬಾಲಕಿಯ ಅಪಹರಣ ಪ್ರಕರಣ: ಅಪರಾಧಿಗೆ 3 ವರ್ಷ ಕಠಿಣ ಸಜೆ
ಶಿವಮೊಗ್ಗ, ನ.15: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಯುವಕನಿಗೆ ಶಿವಮೊಗ್ಗದ 1ನೆ ಹೆಚ್ಚುವರಿ ವಿಶೇಷ ಸತ್ರ ನ್ಯಾಯಾಲಯವು 3 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಢ ವಿಧಿಸಿ ತೀರ್ಪು ನೀಡಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಂಡಜ್ಜಿ ಗ್ರಾಮದ ರಾಕೇಶ್ ಶಿಕ್ಷೆಗೊಳಗಾದ ಯುವಕನೆಂದು ಗುರುತಿಸಲಾಗಿದೆ. ನ್ಯಾಯಾಧೀಶ ಶುಭಾಗೌಡರ್‍ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಸೊರಬ ತಾಲೂಕು ಆನವಟ್ಟಿ ಸರ್ಕಾರಿ ಪದವಿ ಪೂರ್ವ ವಿದ್ಯಾರ್ಥಿನಿಯನ್ನು ಆಕೆ ತಂಗಿದ್ದ ಹಾಸ್ಟೆಲ್‍ನಿಂದ 2015 ರ ಅಕ್ಟೋಬರ್ 28 ರಂದು ರಾಕೇಶ್‍ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದ. ಸುಮಾರು 15 ದಿವಸ ತನ್ನೊಂದಿಗೆ ಇರಿಸಿಕೊಂಡಿದ್ದ.
ಈ ಕುರಿತಂತೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯ್ದೆ ಕಲಂ 6 ಮತ್ತು ಐಪಿಸಿ ಕಲಂ 366 (ಎ) ಅಡಿ ಕೇಸ್ ದಾಖಲಿಸಿದ್ದರು. ಜತೆಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.







