ದಿಲ್ಲಿ: ಸದ್ಬಳಕೆಯಾಗದ ವಾಯುಮಾಲಿನ್ಯ ತಡೆ ನಿಧಿ
ಬಳಕೆಯಾಗದೆ ಉಳಿದಿದೆ 1,500 ಕೋಟಿ ರೂ.
.jpg)
ಹೊಸದಿಲ್ಲಿ, ನ.15: ದಿಲ್ಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆಯನ್ನು ತಡೆಯಲು ಸರಕಾರ ಹರಸಾಹಸ ಪಡುತ್ತಿದೆ. ಆದರೆ ಇನ್ನೊಂದೆಡೆ, ವಾಯುಮಾಲಿನ್ಯ ತಡೆಯ ಉದ್ದೇಶಕ್ಕಾಗಿ ‘ಹಸಿರು ನಿಧಿ’ಯ ಹೆಸರಿನಲ್ಲಿ ಸಂಗ್ರಹಿಸಲಾದ 1,500 ಕೋಟಿ ರೂ.ಗೂ ಹೆಚ್ಚಿನ ಹಣ ಬಳಕೆಯಾಗದೆ ವ್ಯರ್ಥವಾಗಿ ಉಳಿದಿದೆ ಎಂದು ವರದಿಗಳು ತಿಳಿಸಿವೆ.
ಈ ‘ಹಸಿರು ನಿಧಿ’ಗೆ ಸಿಂಹಪಾಲು, ಅಂದರೆ 1,003 ಕೋಟಿ ರೂ. ಯನ್ನು ಸುಪ್ರೀಂಕೋರ್ಟ್‌ನ ‘ಪರಿಸರ ಪರಿಹಾರ ಶುಲ್ಕ ’(ಇಸಿಸಿ) ನಿಧಿಯಿಂದ ನೀಡಲಾಗಿದೆ. ದಿಲ್ಲಿ ಪ್ರವೇಶಿಸುವ ಲಾರಿಗಳ ಮೇಲೆ 2015ರಿಂದ ‘ಪರಿಸರ ಪರಿಹಾರ ಶುಲ್ಕ ’ವನ್ನು ವಸೂಲಿ ಮಾಡಲಾಗುತ್ತಿದೆ. ಅಲ್ಲದೆ 2008ರಿಂದ ಪ್ರತೀ ಲೀಟರ್ ಡೀಸೆಲ್ ಮೇಲೆ ಉಪಕರ ವಿಧಿಸಲಾಗುತ್ತಿದ್ದು, ಇದರಿಂದ ಉಳಿದ ಮೊತ್ತವನ್ನು ನೀಡಲಾಗಿದೆ. ದಿಲ್ಲಿ- ರಾಷ್ಟ್ರ ರಾಜಧಾನಿ ವಲಯದಲ್ಲಿ 2000 ಸಿಸಿಗಿಂತ ಹೆಚ್ಚಿನ ಡೀಸೆಲ್ ಕಾರು ಮಾರಾಟಗಾರರಿಂದ ಶೇ.1ರಷ್ಟು ಉಪಕರ ವಸೂಲು ಮಾಡುವಂತೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಅನುಸಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 62 ಕೋಟಿ ರೂ. ಸಂಗ್ರಹಿಸಿದೆ.
ದಕ್ಷಿಣ ದಿಲ್ಲಿ ನಗರಪಾಲಿಕೆ ಸಂಗ್ರಹಿಸುವ ಇಸಿಸಿಯನ್ನು ಪ್ರತೀ ಶುಕ್ರವಾರ ನಗರದ ಸಾರಿಗೆ ವಿಭಾಗಕ್ಕೆ ಹಸ್ತಾಂತರಿಸುತ್ತದೆ. ಕಳೆದ ಕೆಲ ವರ್ಷಗಳಲ್ಲಿ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿಯು ‘ವಾಯು ಪರಿಸ್ಥಿತಿ ನಿಧಿ’ಯನ್ನು ಸ್ಥಾಪಿಸಿದ್ದು ಈ ನಿಧಿಯಲ್ಲಿ ಸುಮಾರು 500 ಕೋಟಿ ರೂ. ಒಟ್ಟುಸೇರಿದೆ ಎಂದು ಪರಿಸರ ಮತ್ತು ವಿಜ್ಞಾನ ಕೇಂದ್ರದ ಸಂಶೋಧಕ ಉಸ್ಮಾನ್ ನಸೀಮ್ ಹೇಳಿದ್ದಾರೆ.
ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡಲು ಈ ನಿಧಿಯನ್ನು ಬಳಸುವ ಬಗ್ಗೆ ಮಂಗಳವಾರವಷ್ಟೇ ನಿರ್ಧಾರವೊಂದಕ್ಕೆ ಬರಲಾಗಿದೆ ಎಂದು ದಿಲ್ಲಿ ಸರಕಾರದ ಸಾರಿಗೆ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅಧಿಕ ವೆಚ್ಚ ತಗಲುವ ಕಾರಣ ಇದಕ್ಕೆ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಎಷ್ಟು ಇಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಸರಕಾರ ನಿರ್ಧರಿಸಿದೆ ಅಥವಾ ಒಂದು ಬಸ್‌ನ ವೆಚ್ಚ ಎಷ್ಟಾಗುತ್ತದೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಲಿಲ್ಲ.







